





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಕಡ್ಡಾಯವೆಂದು ಅಂಗೀಕರಿಸಿ, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವವರಿಗೆ ಅಲ್ಲಾಹು ಹೇರಳ ಪ್ರತಿಫಲಗಳನ್ನು ಸಿದ್ಧಪಡಿಸಿದ್ದಾನೆಂಬ ನಂಬಿಕೆಯಿಂದ, ಯಾವುದೇ ತೋರಿಕೆ ಅಥವಾ ಪ್ರಶಂಸೆಯನ್ನು ಬಯಸದೆ ಕೇವಲ ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಉದ್ದೇಶಿಸುತ್ತಾ, ಉಪವಾಸ ಆಚರಿಸುತ್ತಾರೋ ಅವರ ಹಿಂದಿನ ಪಾಪಗಳೆಲ್ಲವನ್ನೂ ಕ್ಷಮಿಸಲಾಗುತ್ತದೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯಿಂದ ಕದರ್ನ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಾನೋ, ಅವನಿಗೆ ಅವನ ಹಿಂದಿನ ಪಾಪಗಳನ್ನು ಕ್ಷಮಿಸಲಾಗುವುದು.”
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕದರ್ನ ರಾತ್ರಿಯ ಶ್ರೇಷ್ಠತೆಯನ್ನು ತಿಳಿಸುತ್ತಾರೆ. ಅದು ರಮದಾನ್ ತಿಂಗಳ ಕೊನೆಯ ಹತ್ತರಲ್ಲಿ ಬರುತ್ತದೆ. ಯಾರು ಆ ರಾತ್ರಿಯಲ್ಲಿ ವಿಶ್ವಾಸವಿಟ್ಟು, ಅದರ ಶ್ರೇಷ್ಠತೆಯಲ್ಲಿ ನಂಬಿಕೆಯಿಟ್ಟು, ಯಾವುದೇ ತೋರಿಕೆ ಅಥವಾ ಪ್ರಶಂಸೆಯನ್ನು ಬಯಸದೆ ಕೇವಲ ಅಲ್ಲಾಹನ ಪ್ರತಿಫಲವನ್ನು ಮಾತ್ರ ಅಪೇಕ್ಷಿಸುತ್ತಾ, ಆ ರಾತ್ರಿಯಲ್ಲಿ ನಮಾಝ್, ಪ್ರಾರ್ಥನೆ, ಕುರ್ಆನ್ ಪಠಣ, ಅಲ್ಲಾಹನ ಸ್ಮರಣೆ, ಮುಂತಾದ ಆರಾಧನಾ ಕರ್ಮಗಳಲ್ಲಿ ಪರಿಶ್ರಮಿಸುತ್ತಾರೋ, ಅವರ ಹಿಂದಿನ ಪಾಪಗಳೆಲ್ಲವನ್ನೂ ಕ್ಷಮಿಸಲಾಗುತ್ತದೆ.
ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. ಹೀಗೆ ಹೇಳುವಾಗ ಅವರು ತಮ್ಮ ಬೆರಳುಗಳನ್ನು ಕಿವಿಗಳಲ್ಲಿಟ್ಟರು: "ಹಲಾಲ್ ಅತ್ಯಂತ ಸ್ಪಷ್ಟವಾಗಿದೆ ಮತ್ತು ಹರಾಮ್ ಕೂಡ ಅತ್ಯಂತ ಸ್ಪಷ್ಟವಾಗಿದೆ. ಇವೆರಡರ ಮಧ್ಯೆ ಸಂಶಯಾಸ್ಪದ ವಿಷಯಗಳಿವೆ. ಜನರಲ್ಲಿ ಹೆಚ್ಚಿನವರಿಗೂ ಅವುಗಳ ಬಗ್ಗೆ ಜ್ಞಾನವಿಲ್ಲ. ಯಾರು ಈ ಸಂಶಯಾಸ್ಪದ ವಿಷಯಗಳಿಂದ ದೂರವಿರುತ್ತಾನೋ, ಅವನು ತನ್ನ ಧರ್ಮ ಮತ್ತು ಘನತೆಯನ್ನು ಕಾಪಾಡಿಕೊಂಡನು. ಯಾರು ಈ ಸಂಶಯಾಸ್ಪದ ವಿಷಯಗಳಲ್ಲಿ ಒಳಪಡುತ್ತಾನೋ ಅವನು ಹರಾಮ್ನಲ್ಲಿ ಒಳಪಡುತ್ತಾನೆ. ಅವನ ಸ್ಥಿತಿಯು (ಪ್ರವೇಶಾನುಮತಿಯಿಲ್ಲದ) ಹುಲ್ಲುಗಾವಲಿನ ಅಂಚಿನಲ್ಲಿ ತನ್ನ ಕುರಿಮಂದೆಯನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಅವನ ಕುರಿಗಳು ಹುಲ್ಲುಗಾವಲಿನೊಳಗೆ ನುಗ್ಗಿ ಮೇಯುವ ಸಾಧ್ಯತೆಯಿದೆ. ಎಚ್ಚರಾ! ಪ್ರತಿಯೊಬ್ಬ ರಾಜನಿಗೂ ಒಂದು (ನಿಷೇಧಿತ) ವಲಯವಿದೆ. ಎಚ್ಚರಾ! ಅಲ್ಲಾಹು ನಿಷೇಧಿಸಿದ ಕಾರ್ಯಗಳು ಅವನ (ನಿಷೇಧಿತ) ವಲಯವಾಗಿದೆ. ಎಚ್ಚರಾ! ದೇಹದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಸಂಪೂರ್ಣ ದೇಹವು ಸರಿಯಾಗುತ್ತದೆ. ಅದು ಕೆಟ್ಟರೆ ಸಂಪೂರ್ಣ ದೇಹವು ಕೆಡುತ್ತದೆ. ಎಚ್ಚರಾ! ಅದು ಹೃದಯವಾಗಿದೆ."
Al-Bukhari and Muslimಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸಾಮಾನ್ಯ ಸಿದ್ಧಾಂತವನ್ನು ವಿವರಿಸುತ್ತಾರೆ. ಧರ್ಮದ ಪ್ರಕಾರ ಆ ಸಿದ್ಧಾಂತದಲ್ಲಿ ಮೂರು ಭಾಗಗಳಿವೆ: ಸ್ಪಷ್ಟವಾಗಿರುವ ಧರ್ಮಸಮ್ಮತ ಕಾರ್ಯಗಳು, ಸ್ಪಷ್ಟವಾಗಿರುವ ಧರ್ಮನಿಷೇಧಿತ ಕಾರ್ಯಗಳು ಮತ್ತು ಅಸ್ಪಷ್ಟವಾದ ಸಂಶಯಾಸ್ಪದ ವಿಷಯಗಳು. ಇವು ಧರ್ಮಸಮ್ಮತವೋ ಅಥವಾ ಧರ್ಮನಿಷಿದ್ಧವೋ ಎಂಬ ಬಗ್ಗೆ ಸ್ಪಷ್ಟ ನಿಯಮಗಳಿಲ್ಲ. ಜನರಲ್ಲಿ ಹೆಚ್ಚಿನವರಿಗೆ ಅವುಗಳ ನಿಯಮಗಳ ಬಗ್ಗೆ ತಿಳಿದಿಲ್ಲ. ತಮಗೆ ಸಂಶಯಾಸ್ಪದವಾಗಿ ತೋರುವ ಈ ವಿಷಯಗಳನ್ನು ಯಾರು ತೊರೆಯುತ್ತಾರೋ, ಅವರು ನಿಷೇಧಿತ ಕೃತ್ಯಗಳಲ್ಲಿ ಒಳಗೊಳ್ಳದಂತೆ ತಮ್ಮ ಧರ್ಮವನ್ನು ರಕ್ಷಿಸುತ್ತಾರೆ, ಮತ್ತು ಇಂತಿಂತಹ ನಿಷಿದ್ಧ ಕೃತ್ಯವನ್ನು ಮಾಡಿದ್ದಾನೆ ಎಂಬ ಜನರ ಆಕ್ಷೇಪಗಳಿಂದ ತಮ್ಮ ಘನತೆಯನ್ನು ರಕ್ಷಿಸುತ್ತಾರೆ. ಯಾರು ಇಂತಹ ಸಂಶಯಾಸ್ಪದ ವಿಷಯಗಳಿಂದ ದೂರವಿರುವುದಿಲ್ಲವೋ, ಅವರು ಒಂದೋ ನಿಷಿದ್ಧ ಕೃತ್ಯದಲ್ಲಿ ಒಳಗೊಳ್ಳುತ್ತಾರೆ, ಅಥವಾ ಜನರ ಆಕ್ಷೇಪಗಳಿಗೆ ಗುರಿಯಾಗುತ್ತಾರೆ. ಸಂಶಯಾಸ್ಪದ ಕೃತ್ಯಗಳನ್ನು ಮಾಡುವವರ ಬಗ್ಗೆ ವಿವರಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಒಂದು ಉದಾಹರಣೆಯನ್ನು ನೀಡುತ್ತಾರೆ. ಅವರ ಸ್ಥಿತಿಯು ನಿಷೇಧಿತ ವಲಯದ ಆಸುಪಾಸಿನಲ್ಲಿ ಕುರಿಗಳನ್ನು ಮೇಯಿಸುವ ಒಬ್ಬ ಕುರಿಗಾಹಿಯಂತೆ. ಆ ಕುರಿಗಳು ನಿಷೇಧಿತ ವಲಯಕ್ಕೆ ಹತ್ತಿರದಲ್ಲೇ ಇರುವುದರಿಂದ ಅವು ಅದರೊಳಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಹಾಗೆಯೇ, ಸಂಶಯಾಸ್ಪದ ವಿಷಯಗಳ ಬಳಿ ಸುಳಿಯುವವರು ನಿಷೇಧಿತ ಕೃತ್ಯಗಳಿಗೆ ಬಹಳ ಹತ್ತಿರದಲ್ಲಿರುವುದರಿಂದ ಅವುಗಳಲ್ಲಿ ಒಳಗೊಳ್ಳುವ ಸಾಧ್ಯತೆಗಳಿವೆ. ಇದರ ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೇಹದಲ್ಲಿ ಒಂದು ಮಾಂಸದ ಮುದ್ದೆ (ಹೃದಯ) ಇದೆ ಎಂದು ಹೇಳುತ್ತಾರೆ. ಅದು ಸರಿಯಾದರೆ ದೇಹವು ಸರಿಯಾಗುತ್ತದೆ ಮತ್ತು ಅದು ಕೆಟ್ಟರೆ ದೇಹವು ಕೆಡುತ್ತದೆ ಎಂದು ಅವರು ಹೇಳುತ್ತಾರೆ.
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ವಿನಾಕಾರಣ) ತೊಂದರೆ ಕೊಡಬಾರದು ಮತ್ತು (ಪ್ರತೀಕಾರ ರೂಪದಲ್ಲೂ) ತೊಂದರೆ ಕೊಡಬಾರದು. ಯಾರು ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ."
Ibn Maajahಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸ್ವಯಂ ತನಗೂ ಇತರರಿಗೂ ಉಂಟಾಗುವ ತೊಂದರೆಗಳ ಎಲ್ಲಾ ವಿಧಗಳನ್ನೂ, ರೂಪಗಳನ್ನೂ ತಡೆಗಟ್ಟುವುದು ಕಡ್ಡಾಯವಾಗಿದೆ ಮತ್ತು ಯಾವುದೇ ವ್ಯಕ್ತಿಯೂ ತನಗಾಗಲಿ ಅಥವಾ ಇತರರಿಗಾಗಲಿ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ. ಅದೇ ರೀತಿ, ಯಾರಾದರೂ ತೊಂದರೆ ಕೊಟ್ಟರೆ ಅದಕ್ಕೆ ಪ್ರತಿಯಾಗಿ ಅವನಿಗೆ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ. ಏಕೆಂದರೆ, ತೊಂದರೆಯನ್ನು ತೊಂದರೆಯಿಂದ ನಿವಾರಿಸಲಾಗುವುದಿಲ್ಲ. ಆದರೆ ಹದ್ದು ಮೀರದ ರೀತಿಯಲ್ಲಿರುವ ಪ್ರತೀಕಾರ ಶಿಕ್ಷೆಗಳು ಇದಕ್ಕೆ ಹೊರತಾಗಿವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ತೊಂದರೆ ಕೊಡುವವನಿಗೆ ತೊಂದರೆ ಉಂಟಾಗುತ್ತದೆ ಮತ್ತು ಜನರಿಗೆ ಕಷ್ಟ ಕೊಡುವವನು ಕಷ್ಟವನ್ನು ಅನುಭವಿಸುತ್ತಾನೆ ಎಂದು ಎಚ್ಚರಿಕೆ ನೀಡುತ್ತಾರೆ.
ಇಬ್ನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನನಗೆ ನನ್ನ ನೆರೆಹೊರೆಯವರ ಬಗ್ಗೆ ನಿರಂತರ ಉಪದೇಶ ಮಾಡುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ಅವರು ನನ್ನ ನೆರೆಯವನನ್ನು ನನ್ನ ಆಸ್ತಿಯಲ್ಲಿ ಹಕ್ಕುದಾರನನ್ನಾಗಿ ಮಾಡುತ್ತಾರೋ ಎಂದು ನಾನು ಭಾವಿಸತೊಡಗಿದೆ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನೆರೆಹೊರೆಯವರ ಬಗ್ಗೆ ಕಾಳಜಿ ವಹಿಸಬೇಕೆಂದು ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವರಿಗೆ ಪದೇ ಪದೇ ಆದೇಶಿಸುತ್ತಿದ್ದರು. ನೆರೆಹೊರೆಯವರು ಎಂದರೆ ಮನೆಯ ಸಮೀಪದಲ್ಲಿ ವಾಸಿಸುವವರು. ಅವರು ಮುಸ್ಲಿಮರಾಗಿದ್ದರೂ ಅಲ್ಲದಿದ್ದರೂ, ಸಂಬಂಧಿಕರಾಗಿದ್ದರೂ ಅಲ್ಲದಿದ್ದರೂ ಅವರು ನೆರೆಹೊರೆಯವರಾಗಿದ್ದಾನೆ. ಅವರ ಹಕ್ಕುಗಳನ್ನು ಸಂರಕ್ಷಿಸಬೇಕು ಮತ್ತು ಅವರಿಗೆ ತೊಂದರೆ ಕೊಡಬಾರದು. ಅವರಿಗೆ ಒಳಿತು ಮಾಡಬೇಕು ಮತ್ತು ಅವರು ತೊಂದರೆ ಕೊಟ್ಟರೆ ತಾಳ್ಮೆಯಿಂದಿರಬೇಕು. ಒಬ್ಬ ವ್ಯಕ್ತಿ ನಿಧನನಾದರೆ ಅವನ ನೆರೆಹೊರೆಯವರಿಗೂ ಅವನ ಆಸ್ತಿಯಲ್ಲಿ ಹಕ್ಕಿದೆ ಎಂಬ ಕುರ್ಆನ್ ವಚನ ಅವತೀರ್ಣವಾಗಬಹುದೋ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಾವಿಸುವಷ್ಟರ ಮಟ್ಟಿಗೆ ಈ ರೀತಿ ನೆರೆಹೊರೆಯವರ ಹಕ್ಕುಗಳನ್ನು ಗೌರವಿಸುವುದರ ಬಗ್ಗೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ನಿರಂತರ ಉಪದೇಶಿಸುತ್ತಿದ್ದರು.
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಮಂತ್ರಗಳು, ತಾಯಿತಗಳು ಮತ್ತು ತಿವ್ಲ (ಪತಿ-ಪತ್ನಿಯರಲ್ಲಿ ಪ್ರೀತಿ ಮೂಡಿಸುವ ತಂತ್ರ) ದೇವಸಹಭಾಗಿತ್ವ (ಶಿರ್ಕ್) ಆಗಿದೆ."
Ibn Maajahಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕೆಲವು ಕಾರ್ಯಗಳನ್ನು ಮಾಡುವುದು ಶಿರ್ಕ್ (ದೇವಸಹಭಾಗಿತ್ವ ಅಥವಾ ಬಹುದೇವಾರಾಧನೆ) ಎಂದು ಹೇಳಿದ್ದಾರೆ: ಮೊದಲನೆಯದು: ಮಂತ್ರ. ಅಂದರೆ ಅಜ್ಞಾನಕಾಲದ ಜನರು ರೋಗ ನಿವಾರಣೆಗಾಗಿ ಪಠಿಸುತ್ತಿದ್ದ ದೇವಸಹಭಾಗಿತ್ವವನ್ನು (ಶಿರ್ಕ್) ಒಳಗೊಂಡ ಪದಗಳಿರುವ ಮಂತ್ರಗಳು. ಎರಡನೆಯದು: ತಾಯಿತಗಳು. ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಮಕ್ಕಳು, ಪ್ರಾಣಿಗಳು ಮತ್ತು ಇತರ ವಸ್ತುಗಳಿಗೆ ಇವುಗಳನ್ನು ಕಟ್ಟಲಾಗುತ್ತದೆ. ಮೂರನೆಯದು: ತಿವ್ಲ. ಪತಿ-ಪತ್ನಿಯರಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವಂತೆ ಮಾಡುವ ತಂತ್ರ. ಇವೆಲ್ಲವೂ ಶಿರ್ಕ್ (ದೇವಸಹಭಾಗಿತ್ವ) ಆಗಿವೆ. ಏಕೆಂದರೆ, ಇಲ್ಲಿ ಕೆಲವು ವಿಷಯಗಳಿಗೆ ಕೆಲವು ವಿಷಯಗಳನ್ನು ಕಾರಣವನ್ನಾಗಿ ಮಾಡಲಾಗುತ್ತದೆ. ಆದರೆ ಅವು ಧಾರ್ಮಿಕ ಪುರಾವೆಗಳಿಂದ ಅಥವಾ ಪ್ರಾಯೋಗಿಕ ನೆಲೆಯಿಂದ ಸಾಬೀತಾದ ಕಾರಣಗಳಲ್ಲ. ಕುರ್ಆನ್ ಪಠಣ ಮುಂತಾದ ಧಾರ್ಮಿಕವಾಗಿ ಸಾಬೀತಾದ ಕಾರಣಗಳನ್ನು ಮತ್ತು ಔಷಧಿ ಸೇವನೆ ಮುಂತಾದ ಪ್ರಾಯೋಗಿಕವಾಗಿ ಸಾಬೀತಾದ ಕಾರಣಗಳನ್ನು ರೋಗ ನಿವಾರಣೆಗಾಗಿ ಬಳಸಬಹುದು. ಆದರೆ ಅವು ಕೇವಲ ಕಾರಣಗಳು ಮಾತ್ರ; ಲಾಭ ಮತ್ತು ಹಾನಿ ಅಲ್ಲಾಹನ ಕೈಯಲ್ಲಿದೆ ಎಂದು ವಿಶ್ವಾಸವಿಡುವುದು ಕಡ್ಡಾಯ.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ ಅವರು ತಮ್ಮ ಕರ್ಮಗಳೊಂದಿಗೆ ತೆರಳಿದ್ದಾರೆ.”
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮರಣಹೊಂದಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮತ್ತು ಅವರ ಗೌರವಕ್ಕೆ ಕಳಂಕ ತರುವುದು ನಿಷಿದ್ಧವೆಂದು ತಿಳಿಸುತ್ತಿದ್ದಾರೆ. ಇದು ಬಹಳ ಕೆಟ್ಟ ಗುಣವಾಗಿದೆ. ಏಕೆಂದರೆ, ಅವರು ಮಾಡಿದ ಒಳಿತು ಅಥವಾ ಕೆಡುಕುಗಳೊಂದಿಗೆ ಅವರು ಹೊರಟು ಹೋಗಿದ್ದಾರೆ. ಅದೇ ರೀತಿ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದರಿಂದ ತೊಂದರೆಯಿರುವುದು ಅವರಿಗಲ್ಲ; ಬದಲಿಗೆ ಬದುಕಿರುವವರಿಗಾಗಿದೆ.
ಜುಂದುಬ್ ಬಿನ್ ಅಬ್ದುಲ್ಲಾ ಕಸ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಫಜ್ರ್ ನಮಾಝ್ ಮಾಡುವವನು ಅಲ್ಲಾಹನ ರಕ್ಷಣೆಯಲ್ಲಿದ್ದಾನೆ. ಆದ್ದರಿಂದ, ತನ್ನ ರಕ್ಷಣೆಯನ್ನು ಮುರಿದದ್ದಕ್ಕಾಗಿ ಅಲ್ಲಾಹು ನಿಮ್ಮನ್ನು ಪ್ರಶ್ನಿಸುವಂತೆ ಮಾಡಬೇಡಿ. ಏಕೆಂದರೆ, ತನ್ನ ರಕ್ಷಣೆಯನ್ನು ಮುರಿದದ್ದಕ್ಕಾಗಿ ಅಲ್ಲಾಹು ಯಾರನ್ನಾದರೂ ಪ್ರಶ್ನೆ ಮಾಡಿದರೆ ಅವನನ್ನು ಹಿಡಿದು ತಲೆಕೆಳಗಾಗಿ ನರಕಕ್ಕೆ ಎಸೆಯುತ್ತಾನೆ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಫಜ್ರ್ ನಮಾಝ್ ಮಾಡಿದವನು ಅಲ್ಲಾಹನ ರಕ್ಷಣೆ ಮತ್ತು ಭದ್ರತೆಯಲ್ಲಿರುತ್ತಾನೆ; ಅಲ್ಲಾಹು ಅವನನ್ನು ರಕ್ಷಿಸುತ್ತಾನೆ ಮತ್ತು ಬೆಂಬಲಿಸುತ್ತಾನೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಫಜ್ರ್ ನಮಾಝನ್ನು ತೊರೆಯುವ ಮೂಲಕ ಅಥವಾ ಅದನ್ನು ನಿರ್ವಹಿಸಲು ಹೋಗುವವರಿಗೆ ಅಡ್ಡಿಪಡಿಸುವುದು ಅಥವಾ ಅವರ ಮೇಲೆ ಆಕ್ರಮಣ ಮಾಡುವುದು ಮುಂತಾದವುಗಳ ಮೂಲಕ ಈ ಕರಾರಿನಲ್ಲಿ ಕೊರತೆ ಮಾಡುವವರ ಮತ್ತು ಅದನ್ನು ಮುರಿಯುವವರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಹೀಗೆ ಮಾಡುವವರು ಈ ರಕ್ಷಣೆಯನ್ನು ಮುರಿದಿದ್ದಾರೆ ಮತ್ತು ಅಲ್ಲಾಹನ ವಿಷಯದಲ್ಲಿ ಕೊರತೆ ಮಾಡಿದವರನ್ನು ಅವನು ಪ್ರಶ್ನಿಸುತ್ತಾನೆ ಎಂಬ ಎಚ್ಚರಿಕೆಗೆ ಅರ್ಹರಾಗುತ್ತಾರೆ. ಅಲ್ಲಾಹು ಯಾರನ್ನಾದರೂ ಪ್ರಶ್ನಿಸಿದರೆ ಅವನು ಅವನನ್ನು ಹಿಡಿದು ತಲೆಕೆಳಗಾಗಿ ನರಕಕ್ಕೆ ಎಸೆಯುತ್ತಾನೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ದಾನ ಮಾಡಿದ ಕಾರಣ ಯಾವುದೇ ಆಸ್ತಿ ಕಡಿಮೆಯಾಗಿಲ್ಲ. (ಇತರರನ್ನು) ಮನ್ನಿಸುವ ಗುಣವಿರುವ ದಾಸನಿಗೆ ಅಲ್ಲಾಹು ಗೌರವವನ್ನಲ್ಲದೆ ಬೇರೇನನ್ನೂ ಹೆಚ್ಚಿಸಿಲ್ಲ. ಯಾರು ಅಲ್ಲಾಹನಿಗಾಗಿ ವಿನಯ ತೋರುತ್ತಾನೋ ಅವನನ್ನು ಅಲ್ಲಾಹು ಉನ್ನತಿಗೇರಿಸದೇ ಇರಲಾರ.”
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ದಾನಧರ್ಮವು ಆಸ್ತಿಯನ್ನು ಕಡಿಮೆ ಮಾಡುವುದಿಲ್ಲ. ಬದಲಿಗೆ, ಮನುಷ್ಯನಿಗೆ ಬರುವ ವಿಪತ್ತುಗಳನ್ನು ಅದು ತಡೆಯುತ್ತದೆ. ದಾನ ಮಾಡುವ ವ್ಯಕ್ತಿಗೆ ಅಲ್ಲಾಹು ಮಹಾ ಪ್ರತಿಫಲವನ್ನು ನೀಡುತ್ತಾನೆ. ದಾನ ಮಾಡುವುದರಿಂದ ಲಾಭವಾಗುತ್ತದೆಯೇ ವಿನಾ ನಷ್ಟವಾಗುವುದಿಲ್ಲ. ಪ್ರತೀಕಾರ ಪಡೆಯುವ ಅಥವಾ ಶಿಕ್ಷಿಸುವ ಸಾಮರ್ಥ್ಯವಿದ್ದೂ ಸಹ ಕ್ಷಮಾಗುಣವನ್ನು ಪ್ರದರ್ಶಿಸುವ ವ್ಯಕ್ತಿಗೆ ಅದು ಶಕ್ತಿ ಮತ್ತು ಪ್ರತಿಷ್ಟೆಯನ್ನು ಹೆಚ್ಚಿಸಿಕೊಡುತ್ತದೆ. ಇತರರ ಭಯದಿಂದ, ಅವರನ್ನು ಸಂತೋಷಪಡಿಸುವ ಉದ್ದೇಶದಿಂದ, ಅಥವಾ ಅವರಿಂದ ಏನಾದರೂ ಲಾಭ ಪಡೆಯುವುದಕ್ಕಾಗಿಯಲ್ಲದೆ ಕೇವಲ ಅಲ್ಲಾಹನ ಸಂಪ್ರೀತಿ ಮಾತ್ರ ಬಯಸಿ ಯಾರು ವಿನಯ ತೋರುತ್ತಾರೋ ಅದರ ಪ್ರತಿಫಲವಾಗಿ ಅವರಿಗೆ ಉನ್ನತ ಸ್ಥಾನಮಾನ ಮತ್ತು ಶ್ರೇಷ್ಠತೆ ದೊರಕದೆ ಇರಲಾರದು.