





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಗ್ರಂಥದವರು ಹಿಬ್ರೂ ಭಾಷೆಯಲ್ಲಿ ತೌರಾತ್ ಪಠಿಸುತ್ತಿದ್ದರು ಮತ್ತು ಅರಬ್ಬಿ ಭಾಷೆಯಲ್ಲಿ ಅದರ ಅರ್ಥವನ್ನು ಮುಸ್ಲಿಮರಿಗೆ ವಿವರಿಸುತ್ತಿದ್ದರು. ಆದ್ದರಿಂದ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಗ್ರಂಥದವರ ಮಾತುಗಳನ್ನು ಅಂಗೀಕರಿಸಬೇಡಿ ಮತ್ತು ನಿಷೇಧಿಸಬೇಡಿ. ಬದಲಿಗೆ, ಹೀಗೆ ಹೇಳಿರಿ: ನಾವು ಅಲ್ಲಾಹನಲ್ಲಿ ಮತ್ತು ನಮಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಟ್ಟಿದ್ದೇವೆ. [ಬಕರ:136]."
Al-Bukhariಗ್ರಂಥದವರು ಅವರ ಗ್ರಂಥಗಳಿಂದ ವರದಿ ಮಾಡುವುದನ್ನು ನಂಬಿ ವಂಚಿತರಾಗಬಾರದೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಯಹೂದಿಗಳು ಹೀಬ್ರೂ ಭಾಷೆಯಲ್ಲಿ ತೌರಾತ್ ಪಠಿಸುತಿದ್ದರು. ಅದು ಯಹೂದಿಗಳ ಭಾಷೆಯಾಗಿದೆ. ನಂತರ ಅವರು ಅದನ್ನು ಅರಬ್ಬಿಯಲ್ಲಿ ವಿವರಿಸುತ್ತಿದ್ದರು. ಆದ್ದರಿಂದ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಗ್ರಂಥದವರ ಮಾತುಗಳನ್ನು ಅಂಗೀಕರಿಸಬೇಡಿ ಮತ್ತು ನಿಷೇಧಿಸಬೇಡಿ." ಅಂದರೆ, ಅವರು ಹೇಳುವುದು ಸತ್ಯವೋ ಅಥವಾ ಸುಳ್ಳೋ ಎಂದು ತಿಳಿಯಲಾಗದಿದ್ದರೆ. ಏಕೆಂದರೆ, ನಮಗೆ ಅವತೀರ್ಣವಾದ ಕುರ್ಆನಿನಲ್ಲಿ, ಮತ್ತು ಅವರಿಗೆ ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡಬೇಕೆಂದು ಸರ್ವಶಕ್ತನಾದ ಅಲ್ಲಾಹು ನಮಗೆ ಆದೇಶಿಸಿದ್ದಾನೆ. ಆದರೆ ಅವರು ಅವರ ಗ್ರಂಥಗಳಿಂದ ಉಲ್ಲೇಖಿಸುವ ವಿಷಯಗಳು ಸತ್ಯವೋ ಅಥವಾ ಸುಳ್ಳೋ ಎಂದು ಸ್ಪಷ್ಟಪಡಿಸುವ ಯಾವುದಾದರೂ ಉಲ್ಲೇಖವು ನಮ್ಮ ಧರ್ಮದಲ್ಲಿರುವ ಹೊರತು ಅವುಗಳನ್ನು ಸತ್ಯವೋ ಅಥವಾ ಸುಳ್ಳೋ ಎಂದು ತಿಳಿದುಕೊಳ್ಳಲು ನಮಗೆ ಸಾಧ್ಯವಿಲ್ಲ. ಆದ್ದರಿಂದ ಇಂತಹ ಸಂದರ್ಭದಲ್ಲಿ ನಾವು ತಟಸ್ಥರಾಗಬೇಕು. ನಾವು ಅವರ ಮಾತನ್ನು ಅಂಗೀಕರಿಸಬಾರದು. ಏಕೆಂದರೆ ಅವರು ತಮ್ಮ ಗ್ರಂಥದಲ್ಲಿರುವುದನ್ನು ತಿರುಚಿ ಸುಳ್ಳು ಹೇಳಿದ್ದರೆ ನಾವು ಆ ಸುಳ್ಳಿನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಅದೇ ರೀತಿ, ನಾವು ಅವರ ಮಾತನ್ನು ನಿಷೇಧಿಸಲೂ ಬಾರದು. ಏಕೆಂದರೆ ಅವರ ಮಾತು ಸತ್ಯವಾಗಿದ್ದು ಅವರ ಗ್ರಂಥದಲ್ಲಿರುವುದನ್ನು ವಿಶ್ವಾಸವಿಡಬೇಕೆಂಬ ಆಜ್ಞೆಯನ್ನು ನಾವು ನಿಷೇಧಿಸಿದವರಾಗಿ ಬಿಡುವ ಸಾಧ್ಯತೆಯಿದೆ. ಆದ್ದರಿಂದ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳಲು ಆಜ್ಞಾಪಿಸಿದರು: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ಮತ್ತು ನಾವು ಅವನಿಗೆ ಶರಣಾಗಿ ಜೀವಿಸುತ್ತೇವೆ.” [ಬಕರ:136].
ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಅವತೀರ್ಣವಾಗುವ ತನಕ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರಗಳು (ಕುರ್ಆನಿನ ಅಧ್ಯಾಯಗಳು) ಎಲ್ಲಿ ಕೊನೆಯಾಗುತ್ತವೆಯೆಂದು ತಿಳಿಯುತ್ತಿರಲಿಲ್ಲ."
Abu Dawoodಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ವಿವರಿಸುವುದೇನೆಂದರೆ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕುರ್ಆನ್ ಸೂರಗಳು (ಅಧ್ಯಾಯಗಳು) ಅವತೀರ್ಣವಾಗುತ್ತಿದ್ದವು. ಆದರೆ, ಬಿಸ್ಮಿಲ್ಲಾಹಿ ರ್ರಹ್ಮಾನಿ ರ್ರಹೀಮ್ ಅವತೀರ್ಣವಾಗುವ ತನಕ ಸೂರಗಳು ಎಲ್ಲಿ ಕೊನೆಗೊಳ್ಳುತ್ತವೆಯೆಂದು ಅವರಿಗೆ ತಿಳಿಯುತ್ತಿರಲಿಲ್ಲ. ಅದು ಅವತೀರ್ಣವಾದಾಗ ಹಿಂದಿನ ಸೂರ ಇಲ್ಲಿ ಕೊನೆಯಾಗುತ್ತದೆ ಮತ್ತು ಇಲ್ಲಿಂದ ಹೊಸ ಸೂರ ಆರಂಭವಾಗುತ್ತದೆ ಎಂದು ಅವರು ತಿಳಿಯುತ್ತಿದ್ದರು.
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್ಆನಿನ ವ್ಯಕ್ತಿಯೊಡನೆ ಹೇಳಲಾಗುವುದು: ಪಠಿಸು ಮತ್ತು ಏರುತ್ತಾ ಹೋಗು. ಇಹಲೋಕದಲ್ಲಿ ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."
Abu Dawoodಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಕುರ್ಆನ್ ಪಠಿಸುವವನು, ಅದರ ಪ್ರಕಾರ ಜೀವನ ನಡೆಸಿದವನು ಮತ್ತು ಸದಾ ಕುರ್ಆನ್ ಪಠಿಸುತ್ತಾ ಕಂಠಪಾಠ ಮಾಡುತ್ತಾ ಇದ್ದವನೊಂದಿಗೆ ಅವನು ಸ್ವರ್ಗವನ್ನು ಪ್ರವೇಶಿಸಿದಾಗ ಹೀಗೆ ಹೇಳಲಾಗುವುದು: "ನೀನು ಕುರ್ಆನ್ ಪಠಿಸು ಮತ್ತು ಅದರ ಮೂಲಕ ಸ್ವರ್ಗದ ಪದವಿಗಳಿಗೆ ಏರುತ್ತಾ ಹೋಗು. ಇಹಲೋಕದಲ್ಲಿ ಶಾಂತವಾಗಿ ಮತ್ತು ಸಾವಧಾನದಿಂದ ಪಠಿಸುತ್ತಿದ್ದಂತೆ ಪಠಿಸು. ನೀನು ಪಠಿಸುವ ಕೊನೆಯ ವಚನದ ಬಳಿ ನಿನ್ನ ಪದವಿಯಿದೆ."
ಅಬೂ ಅಬ್ದುರ್ರಹ್ಮಾನ್ ಸುಲಮಿ (ಅಲ್ಲಾಹು ಅವರಿಗೆ ಕರುಣೆ ತೋರಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರ ಸಂಗಡಿಗರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪೈಕಿ ನಮಗೆ ಕುರ್ಆನ್ ಕಲಿಸಿಕೊಡುತ್ತಿದ್ದವರು ಹೇಳುತ್ತಿದ್ದರು: ಅವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ನಂತರ ಆ ಹತ್ತು ವಚನಗಳಲ್ಲಿರುವ ಜ್ಞಾನ ಮತ್ತು ಕರ್ಮವನ್ನು ಕಲಿತುಕೊಳ್ಳದೆ ಅವರು ಮುಂದಿನ ಹತ್ತು ವಚನಗಳಿಗೆ ಹೋಗುತ್ತಿರಲಿಲ್ಲ. ಅವರು ಹೇಳುತ್ತಿದ್ದರು: ನಾವು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದೆವು."
Ahmadಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹತ್ತು ವಚನಗಳನ್ನು ಕಲಿಯುತ್ತಿದ್ದರು. ಆ ಹತ್ತು ವಚನಗಳಲ್ಲಿರುವ ಜ್ಞಾನವನ್ನು ಕಲಿತು ಅದರ ಪ್ರಕಾರ ಕರ್ಮಗಳನ್ನು ಮಾಡುವ ತನಕ ಅವರು ಮುಂದಿನ ಹತ್ತು ವಚನಗಳನ್ನು ಕಲಿಯಲು ಹೋಗುತ್ತಿರಲಿಲ್ಲ. ಅವರು ಜ್ಞಾನ ಮತ್ತು ಕರ್ಮವನ್ನು ಒಟ್ಟೊಟ್ಟಿಗೆ ಕಲಿಯುತ್ತಿದ್ದರು.
ಉಬೈ ಬಿನ್ ಕಅಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಮತ್ತು ಅವನ ಸಂದೇಶವಾಹಕರೇ ಹೆಚ್ಚು ತಿಳಿದವರು." ಅವರು ಕೇಳಿದರು: "ಓ ಅಬೂ ಮುಂದಿರ್! ನಿಮ್ಮ ಕೈಯಲ್ಲಿರುವ ಅಲ್ಲಾಹನ ಗ್ರಂಥದಲ್ಲಿ ಅತಿ ಶ್ರೇಷ್ಠವಾದ ವಚನ ಯಾವುದೆಂದು ನಿಮಗೆ ತಿಳಿದಿದೆಯೇ?" ನಾನು ಹೇಳಿದೆ: "ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್ (ಆಯತುಲ್ ಕುರ್ಸಿ) [ಬಕರ: 255]". ಆಗ ಅವರು ನನ್ನ ಎದೆಗೆ ತಟ್ಟುತ್ತಾ ಹೇಳಿದರು: "ಅಲ್ಲಾಹನಾಣೆ! ಓ ಅಬೂ ಮುಂದಿರ್, ಜ್ಞಾನವು ನಿಮಗೆ ಸಂತೋಷವನ್ನು ದಯಪಾಲಿಸಲಿ."
Muslimಅಲ್ಲಾಹನ ಗ್ರಂಥದಲ್ಲಿರುವ ಅತಿ ಶ್ರೇಷ್ಠ ವಚನದ ಬಗ್ಗೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉಬೈ ಬಿನ್ ಕಅಬ್ರೊಡನೆ ಕೇಳಿದರು. ಆದರೆ ಅವರು ಉತ್ತರ ಹೇಳಲು ಹಿಂಜರಿದರು. ನಂತರ ಅವರು ಅದು ಆಯತುಲ್ ಕುರ್ಸಿ “ಅಲ್ಲಾಹು ಲಾ ಇಲಾಹ ಇಲ್ಲಾ ಹುವಲ್ ಹಯ್ಯುಲ್ ಕಯ್ಯೂಮ್” ಎಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಒಪ್ಪಿಕೊಂಡು, ಅವರ ಎದೆಯು ಜ್ಞಾನ ಮತ್ತು ಯುಕ್ತಿಯಿಂದ ತುಂಬಿದೆಯೆಂದು ಸೂಚಿಸಲು ಅದನ್ನು ತಟ್ಟಿದರು. ನಂತರ ಆ ಜ್ಞಾನವು ಅವರಿಗೆ ಸಂತೋಷವನ್ನು ನೀಡಲಿ ಮತ್ತು ಜ್ಞಾನ ಸಂಪಾದನೆಯ ಮಾರ್ಗವು ಅವರಿಗೆ ಸುಲಭವಾಗಲಿ ಎಂದು ಪ್ರಾರ್ಥಿಸಿದರು.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ರಾತ್ರಿಗಳಲ್ಲೂ ಮಲಗಲು ಹೊರಡುವಾಗ ತಮ್ಮ ಎರಡು ಅಂಗೈಗಳನ್ನು ಜೋಡಿಸುತ್ತಿದ್ದರು. ನಂತರ ಅದಕ್ಕೆ ಮೂರು ಬಾರಿ ಉಗಿದು "ಕುಲ್ ಹುವಲ್ಲಾಹು ಅಹದ್", "ಕುಲ್ ಅಊದು ಬಿರಬ್ಬಿಲ್ ಫಲಕ್" ಮತ್ತು "ಕುಲ್ ಅಊದು ಬಿರಬ್ಬಿ ನ್ನಾಸ್" ಪಠಿಸುತ್ತಿದ್ದರು. ನಂತರ ದೇಹದಲ್ಲಿ ತಲುಪಲು ಸಾಧ್ಯವಾಗುವ ಎಲ್ಲಾ ಭಾಗಗಳನ್ನು ಕೈಗಳಿಂದ ಸವರುತ್ತಿದ್ದರು. ಅವರು ಮೊದಲು ತಲೆಯಿಂದ ಆರಂಭಿಸುತ್ತಿದ್ದರು, ನಂತರ ಮುಖವನ್ನು ಸವರುತ್ತಿದ್ದರು, ನಂತರ ದೇಹದ ಮುಂಭಾಗವನ್ನು ಸವರುತ್ತಿದ್ದರು. ಅವರು ಇದನ್ನು ಮೂರು ಸಲ ಆವರ್ತಿಸುತ್ತಿದ್ದರು."
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಾತ್ರಿ ಮಲಗಲು ಹೊರಡುವಾಗ, ಪ್ರಾರ್ಥಿಸುವವನು ಮಾಡುವಂತೆ ತನ್ನ ಅಂಗೈಗಳನ್ನು ಜೋಡಿಸಿ, ಅದಕ್ಕೆ ಹಗುರವಾಗಿ ಸ್ವಲ್ಪ ಉಗುಳು ಬರುವಂತೆ ಉಗಿಯುತ್ತಿದ್ದರು. ನಂತರ ಮೂರು ಸೂರಗಳನ್ನು ಪಠಿಸುತಿದ್ದರು, "ಕುಲ್ ಹುವಲ್ಲಾಹು ಅಹದ್", "ಕುಲ್ ಅಊದು ಬಿರಬ್ಬಿಲ್ ಫಲಕ್" ಮತ್ತು "ಕುಲ್ ಅಊದು ಬಿರಬ್ಬಿ ನ್ನಾಸ್." ನಂತರ ದೇಹದಲ್ಲಿ ತಲುಪಬಹುದಾದ ಎಲ್ಲಾ ಭಾಗಗಳನ್ನು ಸವರುತ್ತಿದ್ದರು. ಮೊದಲು ತಲೆಯಿಂದ ಆರಂಭಿಸಿ, ನಂತರ ಮುಖವನ್ನು, ನಂತರ ದೇಹದ ಮುಂಭಾಗವನ್ನು ಸವರುತ್ತಿದ್ದರು. ಅವರು ಇದನ್ನು ಮೂರು ಸಲ ಮಾಡುತ್ತಿದ್ದರು.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಒಮ್ಮೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ. ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ ಕಡೆಯಿಂದಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." [ಆಲು ಇಮ್ರಾನ್:7] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ಕಂಡರೆ, ಅವರೇ ಅಲ್ಲಾಹು (ಈ ವಚನದಲ್ಲಿ) ಹೇಳಿದ ಜನರು (ಎಂದು ತಿಳಿಯಿರಿ); ಮತ್ತು ಅವರ ಬಗ್ಗೆ ಎಚ್ಚರವಾಗಿರಿ."
Al-Bukhari and Muslimಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: "ತಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ. ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ ಕಡೆಯಿಂದಾಗಿದೆ. ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಸ್ವೀಕರಿಸುವುದಿಲ್ಲ." ಈ ವಚನದಲ್ಲಿ ಸರ್ವಶಕ್ತನಾದ ಅಲ್ಲಾಹು ತಿಳಿಸುವುದೇನೆಂದರೆ, ತನ್ನ ಪ್ರವಾದಿಗೆ ಕುರ್ಆನನ್ನು ಅವತೀರ್ಣಗೊಳಿಸಿದವನು ಅವನೇ ಆಗಿದ್ದಾನೆ. ಅದರಲ್ಲಿ ಸ್ಪಷ್ಟವಾದ ಅರ್ಥವನ್ನು ಹೊಂದಿರುವ ವಚನಗಳಿವೆ. ಆ ವಚನಗಳಲ್ಲಿರುವ ನಿಯಮಗಳು ಸ್ಪಷ್ಟವಾಗಿದ್ದು ಯಾವುದೇ ಗೊಂದಲಗಳಿಲ್ಲ. ಅವು ಗ್ರಂಥದ ಮೂಲ ಪರಾಮರ್ಶೆಯಾಗಿವೆ. ಭಿನ್ನಮತ ಉಂಟಾಗುವಾಗ ಆ ವಚನಗಳನ್ನು ಅವಲಂಬಿಸಬೇಕಾಗಿದೆ. ಅದೇ ರೀತಿ, ಅದರಲ್ಲಿ ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಹೊಂದಿರುವ ಕೆಲವು ವಚನಗಳಿವೆ. ಜನಸಾಮಾನ್ಯರಿಗೆ ಸಂಬಂಧಿಸಿದಂತೆ ಅವು ಗೊಂದಲಕಾರಿಯಾಗಿವೆ. ಅಥವಾ ಅವು ಇತರ ವಚನಗಳಿಗೆ ವಿರುದ್ಧವಾಗಿದೆಯೆಂದು ಅವರು ಭಾವಿಸುತ್ತಾರೆ. ನಂತರ ಈ ವಚನಗಳೊಂದಿಗೆ ಜನರು ಹೇಗೆ ವರ್ತಿಸುತ್ತಾರೆಂದು ವಿವರಿಸುತ್ತಾ ಅಲ್ಲಾಹು ಹೇಳುತ್ತಾನೆ: ಸತ್ಯದಿಂದ ದೂರ ಸರಿಯುವ ಮನಸ್ಥಿತಿಯಿರುವವರು ಸ್ಪಷ್ಟ ಅರ್ಥವನ್ನು ಹೊಂದಿರುವ ವಚನಗಳನ್ನು ಬಿಟ್ಟು ಹೋಲಿಕೆಯಿರುವ ಮತ್ತು ಹಲವು ಅರ್ಥಗಳ ಸಾಧ್ಯತೆಯಿರುವ ವಚನಗಳ ಹಿಂದೆ ಹೋಗುತ್ತಾರೆ. ಅವರು ಅದರ ಮೂಲಕ ಸಂಶಯಗಳನ್ನು ಹಬ್ಬಿಸಿ ಜನರನ್ನು ದಾರಿ ತಪ್ಪಿಸಲು ಬಯಸುತ್ತಾರೆ. ಅವರು ತಮ್ಮ ಮನಸ್ಸಿಗೆ ಹೊಂದಿಕೊಳ್ಳುವಂತೆ ಅವುಗಳನ್ನು ವ್ಯಾಖ್ಯಾನಿಸಲು ಬಯಸುತ್ತಾರೆ. ಆದರೆ ಜ್ಞಾನದಲ್ಲಿ ಸದೃಢರಾಗಿರುವವರು ಈ ಹೋಲಿಕೆಗಳನ್ನು ಅರ್ಥ ಮಾಡಿಕೊಂಡು, ಸ್ಪಷ್ಟ ಅರ್ಥವಿರುವ ವಚನಗಳನ್ನು ಬಳಸಿ ಇವುಗಳ ಸರಿಯಾದ ಅರ್ಥವನ್ನು ತಿಳಿದುಕೊಳ್ಳುತ್ತಾರೆ. ಅವರು ಅದರಲ್ಲಿ ಮತ್ತು ಅವೆಲ್ಲವೂ ಅಲ್ಲಾಹನಿಂದ ಅವತೀರ್ಣವಾದ ವಚನಗಳೆಂದು ನಂಬಿಕೆಯಿಡುತ್ತಾರೆ. ಏಕೆಂದರೆ, ಅಲ್ಲಾಹನ ವಚನಗಳಲ್ಲಿ ಯಾವುದೇ ಗೊಂದಲವಿರಲು ಸಾಧ್ಯವಿಲ್ಲ, ಮತ್ತು ಅವು ವಿರೋಧಾಸ್ಪದವಾಗಿರಲೂ ಸಾಧ್ಯವಿಲ್ಲ. ಆದರೆ ಆರೋಗ್ಯವಂತ ಬುದ್ಧಿಯನ್ನು ಹೊಂದಿರುವವರ ಹೊರತು ಇನ್ನಾರೂ ಇದರಿಂದ ಉಪದೇಶ ಪಡೆಯುವುದಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರೊಡನೆ ಹೇಳುವುದೇನೆಂದರೆ, ಹೋಲಿಕೆಯಿರುವ ವಚನಗಳ ಹಿಂದೆ ಹೋಗುವವರನ್ನು ನೀನೇನಾದರೂ ನೋಡಿದರೆ, ಅಲ್ಲಾಹು ಈ ವಚನದಲ್ಲಿ ಹೇಳಿದ "ಹೃದಯದಲ್ಲಿ ವಕ್ರತೆ ಇರುವವರು" ಅವರೇ ಆಗಿದ್ದಾರೆ ಎಂದು ತಿಳಿದುಕೋ. ಅವರ ಬಗ್ಗೆ ಎಚ್ಚರವಾಗಿರು ಮತ್ತು ಅವರ ಮಾತುಗಳಿಗೆ ಕಿವಿಗೊಡಬೇಡ.
ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನನ್ನಿಂದ ಒಂದೇ ಒಂದು ವಚನವನ್ನಾದರೂ ತಲುಪಿಸಿ. ಬನೂ ಇಸ್ರಾಯೀಲರಿಂದ ಉಲ್ಲೇಖಿಸಿ, ಅದರಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಯಾರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಾನೋ ಅವನು ನರಕದಲ್ಲಿ ತನ್ನ ಆಸನವನ್ನು ಸಿದ್ಧಪಡಿಸಿಕೊಳ್ಳಲಿ.”
Al-Bukhariಕುರ್ಆನ್ ಮತ್ತು ಸುನ್ನತ್ತಿನಿಂದ ಏನಾದರೂ ಜ್ಞಾನವನ್ನು ತಲುಪಿಸಿಕೊಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ಅದು ಒಂದೇ ಒಂದು ಸೂಕ್ತಿ ಅಥವಾ ಹದೀಸ್ ಆಗಿದ್ದರೂ ಪರವಾಗಿಲ್ಲ. ಆದರೆ ತಾನು ತಲುಪಿಸುವ ಆ ಸೂಕ್ತಿ ಅಥವಾ ಹದೀಸಿನ ಬಗ್ಗೆ ಸ್ಪಷ್ಟ ಜ್ಞಾನವಿರಬೇಕಾದ ಅಗತ್ಯವಿದೆ. ನಂತರ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬನೂ ಇಸ್ರಾಯೀಲರಿಂದ , ಅವರಿಗೆ ಸಂಭವಿಸಿದ ಕೆಲವು ಘಟನೆಗಳನ್ನು, ಅವು ನಮ್ಮ ಧರ್ಮಸಂಹಿತೆಗೆ (ಶರಿಯತ್) ವಿರುದ್ಧವಾಗಿರದಿದ್ದರೆ ಉಲ್ಲೇಖಿಸುವುದರಲ್ಲಿ ತೊಂದರೆಯಿಲ್ಲವೆಂದು ವಿವರಿಸಿದ್ದಾರೆ. ನಂತರ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಹೆಸರಲ್ಲಿ ಸುಳ್ಳು ಹೇಳುವುದರ ಬಗ್ಗೆ ಎಚ್ಚರಿಸಿದ್ದಾರೆ. ಅವರ ಬಗ್ಗೆ ಯಾರಾದರೂ ಉದ್ದೇಶಪೂರ್ವಕ ಸುಳ್ಳು ಹೇಳಿದರೆ, ಅವನು ನರಕದಲ್ಲಿ ತನ್ನ ಆಸನವನ್ನು, ಅಂದರೆ ಅವನ ವಾಸಸ್ಥಳವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾನೆ.
ಮಿಕ್ದಾಮ್ ಬಿನ್ ಮಅದೀ ಕರಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಎಚ್ಚರಾ! ಒರಗು ಕುರ್ಚಿಯಲ್ಲಿ ಕುಳಿತಿರುವ ಒಬ್ಬ ವ್ಯಕ್ತಿಗೆ ನಾನು ಹೇಳಿದ ಒಂದು ಹದೀಸ್ ತಲುಪುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ಬಳಿ ಅಲ್ಲಾಹನ ಗ್ರಂಥವಿದೆ. ಅದರಲ್ಲಿ ಏನು ಅನುಮತಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ ಅದನ್ನು ನಾವು ಧರ್ಮಸಮ್ಮತವೆಂದು ಪರಿಗಣಿಸುತ್ತೇವೆ., ಅದರಲ್ಲಿ ಏನು ನಿಷೇಧಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ಧರ್ಮನಿಷಿದ್ಧವೆಂದು ಪರಿಗಣಿಸುತ್ತೇವೆ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದೆಲ್ಲವೂ ಅಲ್ಲಾಹು ನಿಷೇಧಿಸಿದಂತೆಯೇ ಆಗಿದೆ."
Ibn Maajahಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸಮೀಪದಲ್ಲಿ ಒಂದು ಕಾಲವು ಬರಲಿದೆ. ಆಗ ಜನರಲ್ಲಿ ಒಬ್ಬನು ಆರಾಮಕುರ್ಚಿಯಲ್ಲಿ ಒರಗಿಕೊಂಡಿರುತ್ತಾನೆ. ನನ್ನ ಒಂದು ಹದೀಸನ್ನು ಅವನ ಮುಂದೆ ಪಠಿಸಲಾಗುತ್ತದೆ. ಆಗ ಅವನು ಹೇಳುತ್ತಾನೆ: ನಮ್ಮ ವಿಷಯದಲ್ಲಿ ಪವಿತ್ರ ಕುರ್ಆನ್ ತೀರ್ಪು ನೀಡುತ್ತದೆ. ಅದು ನಮಗೆ ಯಥೇಷ್ಟ ಸಾಕು. ಅದರಲ್ಲಿ ಏನು ಅನುಮತಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ಸ್ವೀಕರಿಸುತ್ತೇವೆ. ಅದರಲ್ಲಿ ಏನು ನಿಷೇಧಿಸಲಾಗಿದೆಯೆಂದು ನಾವು ಕಾಣುತ್ತೇವೆಯೋ, ಅದನ್ನು ನಾವು ತಿರಸ್ಕರಿಸುತ್ತೇವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸುನ್ನತ್ನಲ್ಲಿ (ಹದೀಸ್ನಲ್ಲಿ) ನಿಷೇಧಿಸಲಾಗಿರುವ ಅಥವಾ ವಿರೋಧಿಸಲಾಗಿರುವ ವಿಷಯಗಳೆಲ್ಲವೂ ಪವಿತ್ರ ಕುರ್ಆನಿನಲ್ಲಿ ಅಲ್ಲಾಹು ನಿಷೇಧಿಸಿರುವ ವಿಷಯಗಳ ಅದೇ ನಿಯಮವನ್ನು ಹೊಂದಿವೆ ಎಂದು ತಿಳಿಸುತ್ತಾರೆ. ಏಕೆಂದರೆ ಅವರು ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸಿಕೊಡುವವರು.