





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ಕುಳಿತುಕೊಂಡು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಅಧೀನದಲ್ಲಿ ಇಬ್ಬರು ಗುಲಾಮರಿದ್ದಾರೆ. ಅವರು ನನ್ನಲ್ಲಿ ಸುಳ್ಳು ಹೇಳುತ್ತಾರೆ, ನನಗೆ ಮೋಸ ಮಾಡುತ್ತಾರೆ ಮತ್ತು ನನ್ನ ಮಾತನ್ನು ಕೇಳುವುದಿಲ್ಲ. ನಾನು ಅವರಿಗೆ ಗದರಿಸುತ್ತೇನೆ ಮತ್ತು ಹೊಡೆಯುತ್ತೇನೆ. ಅವರಿಗೆ ಸಂಬಂಧಿಸಿದಂತೆ ನನ್ನ ಸ್ಥಿತಿಯೇನು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವರು ಮೋಸ ಮಾಡಿದ್ದು, ತಮ್ಮ ಮಾತನ್ನು ಕೇಳದೇ ಇದ್ದದ್ದು ಮತ್ತು ತಮ್ಮಲ್ಲಿ ಸುಳ್ಳು ಹೇಳಿದ್ದನ್ನು ನೀವು ಅವರಿಗೆ ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ. ನೀವು ನೀಡುವ ಶಿಕ್ಷೆಯು ಅವರು ಮಾಡಿದ ಪಾಪಗಳಷ್ಟೇ ಇದ್ದರೆ ಎರಡೂ ಸಮಾನವಾಗುತ್ತದೆ. ಅದರಲ್ಲಿ ನಿಮಗೆ ಪ್ರತಿಫಲ ಅಥವಾ ಶಿಕ್ಷೆಯಿಲ್ಲ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಕಡಿಮೆ ಇದ್ದರೆ ನಿಮಗೆ ಪ್ರತಿಫಲವಿದೆ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಹೆಚ್ಚಿದ್ದರೆ ಪ್ರತೀಕಾರವಾಗಿ ನಿಮ್ಮ ಕೆಲವು ಪುಣ್ಯಕಾರ್ಯಗಳನ್ನು ಅವರಿಗೆ ನೀಡಲಾಗುತ್ತದೆ." ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿ ಈ ವಚನವನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ."
At-Tirmidhiಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ತನ್ನ ಗುಲಾಮರ ವರ್ತನೆಯ ಬಗ್ಗೆ ದೂರು ನೀಡುತ್ತಾರೆ. ಅವರು ಸುಳ್ಳು ಹೇಳುತ್ತಾರೆ, ನಂಬಿಕೆ ಇಟ್ಟರೆ ಮೋಸ ಮಾಡುತ್ತಾರೆ, ವ್ಯವಹಾರಗಳಲ್ಲಿ ವಂಚನೆ ಮಾಡುತ್ತಾರೆ, ಹೇಳಿದ ಮಾತನ್ನು ಕೇಳುವುದಿಲ್ಲ ಎನ್ನುತ್ತಾರೆ. ಅವರನ್ನು ಶಿಸ್ತಿನಲ್ಲಿಡುವುದಕ್ಕಾಗಿ ತಾನು ಅವರಿಗೆ ಗದರಿಸುತ್ತಲೂ ಥಳಿಸುತ್ತಲೂ ಇರುತ್ತೇನೆಂದು ಹೇಳುತ್ತಾರೆ. ಆದ್ದರಿಂದ ಪುನರುತ್ಥಾನ ದಿನ ತನ್ನ ಸ್ಥಿತಿ ಏನಾಗಿರಬಹುದು ಎಂದು ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುತ್ತಾರೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: ಅವರು ಮಾಡಿದ ವಂಚನೆ, ಅವಿಧೇಯತೆ ಮತ್ತು ಸುಳ್ಳನ್ನು ನೀವು ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ. ಅವರ ಪಾಪಗಳು ಮತ್ತು ನಿಮ್ಮ ಶಿಕ್ಷೆಯು ಸರಿಸಮವಾದರೆ ತಮಗೆ ಪ್ರತಿಫಲವಾಗಲಿ ಶಿಕ್ಷೆಯಾಗಲಿ ಇಲ್ಲ. ನೀವು ನೀಡಿದ ಶಿಕ್ಷೆಯು ಅವರು ಮಾಡಿದ ಪಾಪಗಳಿಗಿಂತ ಕಡಿಮೆಯಿದ್ದರೆ ನಿಮಗೆ ಹೆಚ್ಚುವರಿ ಪ್ರತಿಫಲವಿದೆ. ನೀವು ನೀಡಿದ ಶಿಕ್ಷೆಯು ಅವರು ಮಾಡಿದ ಪಾಪಗಳಿಗಿಂತ ಹೆಚ್ಚಿದ್ದರೆ ನಿಮ್ಮನ್ನು ಶಿಕ್ಷಿಸಲಾಗುತ್ತದೆ; ಆ ಹೆಚ್ಚುವರಿಯನ್ನು ನಿಮ್ಮ ಪುಣ್ಯಕಾರ್ಯಗಳಿಂದ ತೆಗೆದು ಅವರಿಗೆ ನೀಡಲಾಗುತ್ತದೆ. ಆಗ ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿರುವುದನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ. ಅದು (ಕರ್ಮವು) ಒಂದು ಸಾಸಿವೆ ಕಾಳಿನಷ್ಟು ತೂಕವಿದ್ದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಸಾಕು." [ಅಲ್-ಅಂಬಿಯಾ:47]. ಪುನರುತ್ಥಾನ ದಿನದಂದು ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ. ಜನರ ನಡುವೆ ತಕ್ಕಡಿಗಳನ್ನು ನ್ಯಾಯಬದ್ಧವಾಗಿ ಸ್ಥಾಪಿಸಲಾಗುವುದು. ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ಅಲ್ಲಾಹನ ಸಂಪ್ರೀತಿಗಾಗಿ ಮತ್ತು ಪರಲೋಕದ ವಿಚಾರಣೆ ಹಾಗೂ ಶಿಕ್ಷೆಯ ಭಯದಿಂದ ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ."
ಅಬೂ ಮೂಸಾ ಅಶ್ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈ ಕುರ್ಆನಿನ ಬಗ್ಗೆ ನಿಗಾ ವಹಿಸಿರಿ. ಏಕೆಂದರೆ ಮುಹಮ್ಮದರ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ಒಂಟೆಗಳು ಅವುಗಳನ್ನು ಕಟ್ಟಿಹಾಕಲಾದ ಹಗ್ಗಗಳಿಂದ ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಕುರ್ಆನ್ ನೆನಪಿನಿಂದ ಮಾಸಿ ಹೋಗುತ್ತದೆ."
Al-Bukhari and Muslimಕುರ್ಆನಿನ ಬಗ್ಗೆ ನಿಗಾ ವಹಿಸಬೇಕೆಂದು ಮತ್ತು ಅದನ್ನು ಕಂಠಪಾಠ ಮಾಡಿದ ನಂತರ ಅದು ಮರೆತು ಹೋಗದಿರಲು ಅದನ್ನು ನಿರಂತರ ಪಠಿಸುತ್ತಿರಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಆದೇಶಿಸುತ್ತಿದ್ದಾರೆ. ನಂತರ ತಮ್ಮ ಮಾತಿಗೆ ಒತ್ತು ಕೊಡುತ್ತಾ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಮೇಲೆ ಆಣೆಮಾಡಿ ಹೇಳುವುದೇನೆಂದರೆ, ತಮ್ಮ ಮುಂಗಾಲಿನ ಮಧ್ಯದಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗಿರುವ ಒಂಟೆಗಳು ತಪ್ಪಿಸಿಕೊಳ್ಳುವುದಕ್ಕಿಂತಲೂ ವೇಗವಾಗಿ ಪವಿತ್ರ ಕುರ್ಆನ್ ಸ್ಮೃತಿ ಪಟಲದಿಂದ ಮಾಸಿ ಹೋಗುತ್ತದೆ. ಮನುಷ್ಯನು ಅದರ ಬಗ್ಗೆ ನಿಗಾ ವಹಿಸಿದರೆ, ಅದು ಅವನೊಂದಿಗೆ ಇರುತ್ತದೆ. ಆದರೆ, ಅವನು ಅದನ್ನು ನಿರ್ಲಕ್ಷಿಸಿದರೆ, ಅದು ಹೊರಟು ಹೋಗುತ್ತದೆ ಮತ್ತು ಕಳೆದು ಹೋಗುತ್ತದೆ.
ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕುರ್ಆನ್ ಅನ್ನು ಕಲಿಯುವವರು ಮತ್ತು ಅದನ್ನು ಕಲಿಸುವವರು ನಿಮ್ಮಲ್ಲಿ ಅತ್ಯುತ್ತಮರು."
Al-Bukhariಪವಿತ್ರ ಕುರ್ಆನ್ ಅನ್ನು ಪಠಿಸುವವರು, ಕಂಠಪಾಠ ಮಾಡುವವರು, ಸುಶ್ರಾವ್ಯವಾಗಿ ಪಾರಾಯಣ ಮಾಡುವವರು, ಅದರಿಂದ ಜ್ಞಾನವನ್ನು ಪಡೆಯುವವರು, ಅದರ ವ್ಯಾಖ್ಯಾನವನ್ನು ಕಲಿಯುವವರು ಅದರ ಪ್ರಕಾರ ಜೀವನವನ್ನು ರೂಪಿಸಿಕೊಳ್ಳುವುದರ ಜೊತೆಗೆ ತನ್ನಲ್ಲಿರುವ ಕುರ್ಆನಿನ ಜ್ಞಾನವನ್ನು ಇತರರಿಗೆ ಕಲಿಸಿಕೊಡುವವರು ಮುಸಲ್ಮಾನರ ಪೈಕಿ ಅತ್ಯುತ್ತಮರು ಮತ್ತು ಅಲ್ಲಾಹನ ಬಳಿ ಉನ್ನತ ಸ್ಥಾನಮಾನಗಳನ್ನು ಪಡೆಯುವವರು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುತ್ತಿದ್ದಾರೆ.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ಮನೆಗಳನ್ನು ಸಮಾಧಿಗಳನ್ನಾಗಿ ಮಾಡಬೇಡಿ. ನಿಶ್ಚಯವಾಗಿಯೂ ಸೂರ ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ."
Muslimಮನೆಗಳಲ್ಲಿ ನಮಾಝ್ ಮಾಡದಿರುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿರೋಧಿಸುತ್ತಾರೆ. ಏಕೆಂದರೆ ಇದರಿಂದ ಮನೆಗಳು ಸಮಾಧಿಸ್ಥಳವಾಗಿ ಮಾರ್ಪಡುತ್ತದೆ. ಸಮಾಧಿಸ್ಥಳವು ನಮಾಝ್ ಮಾಡುವ ಸ್ಥಳವಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸೂರ ಬಕರ ಪಠಿಸಲಾಗುವ ಮನೆಯಿಂದ ಶೈತಾನನು ಓಡಿ ಹೋಗುತ್ತಾನೆ ಎಂದು ತಿಳಿಸುತ್ತಾರೆ.
ಅಬೂ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಅವೆರಡು ಸಾಕು."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ರಾತ್ರಿಯಲ್ಲಿ ಸೂರ ಬಕರದ ಕೊನೆಯ ಎರಡು ಶ್ಲೋಕಗಳನ್ನು ಪಠಿಸುತ್ತಾರೋ, ಅವರಿಗೆ ಎಲ್ಲಾ ಕೆಡುಕು ಮತ್ತು ತೊಂದರೆಗಳಿಂದ ರಕ್ಷಣೆ ಪಡೆಯಲು ಅಲ್ಲಾಹು ಆ ಎರಡು ಶ್ಲೋಕಗಳು ಸಾಕಾಗುವಂತೆ ಮಾಡುತ್ತಾನೆ. ಅವರಿಗೆ ಆ ರಾತ್ರಿಯಲ್ಲಿ ಪೂರ್ಣವಾಗಿ ನಮಾಝ್ ನಿರ್ವಹಿಸುವುದಕ್ಕೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ರಾತ್ರಿಯಲ್ಲಿ ಹೇಳುವ ಎಲ್ಲಾ ದಿಕ್ರ್ಗಳಿಗೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಬೇರೆ ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ರಾತ್ರಿ ನಮಾಝಿನಲ್ಲಿ ದೀರ್ಘವಾಗಿ ಕುರ್ಆನ್ ಪಠಿಸುವುದಕ್ಕೆ ಬದಲು ಈ ಎರಡು ಶ್ಲೋಕಗಳನ್ನು ಪಠಿಸಿದರೆ ಸಾಕು ಎಂದು ಇತರ ಕೆಲವು ವಿದ್ವಾಂಸರು ಅರ್ಥ ಹೇಳಿದ್ದಾರೆ. ವಿದ್ವಾಂಸರಿಂದ ಬೇರೆ ಅಭಿಪ್ರಾಯಗಳೂ ವರದಿಯಾಗಿವೆ. ಬಹುಶಃ ಈ ಎಲ್ಲಾ ಅಭಿಪ್ರಾಯಗಳು ಸರಿಯಾಗಿದ್ದು ಎಲ್ಲವನ್ನೂ ಈ ಹದೀಸ್ ಒಳಗೊಳ್ಳಬಹುದು.
ಅಬ್ದುಲ್ಲಾ ಬಿನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುತ್ತಾರೋ ಅವರಿಗೆ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಒಂದು ಒಳಿತು ಅದರ ಹತ್ತು ಪಟ್ಟು ಒಳಿತುಗಳ ಪ್ರತಿಫಲವನ್ನು ಒಳಗೊಂಡಿದೆ. ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ."
At-Tirmidhiಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಅಲ್ಲಾಹನ ಗ್ರಂಥದಿಂದ ಒಂದು ಅಕ್ಷರವನ್ನು ಪಠಿಸುವ ಪ್ರತಿಯೊಬ್ಬ ಮುಸಲ್ಮಾನನಿಗೂ ಒಂದು ಒಳಿತು ಮಾಡಿದ ಪ್ರತಿಫಲವಿದೆ. ಅವನಿಗೆ ಹತ್ತು ಒಳಿತುಗಳನ್ನು ಮಾಡಿದಷ್ಟು ಆ ಪ್ರತಿಫಲವನ್ನು ದ್ವಿಗುಣಗೊಳಿಸಲಾಗುತ್ತದೆ. ನಂತರ ಅವರು ಅದನ್ನು ವಿವರಿಸುತ್ತಾ ಹೀಗೆ ಹೇಳುತ್ತಾರೆ: "ಅಲಿಫ್-ಲಾಮ್-ಮೀಮ್ ಒಂದೇ ಅಕ್ಷರವೆಂದು ನಾನು ಹೇಳುವುದಿಲ್ಲ. ಆದರೆ, ಅಲಿಫ್ ಒಂದು ಅಕ್ಷರವಾಗಿದೆ, ಲಾಮ್ ಒಂದು ಅಕ್ಷರವಾಗಿದೆ ಮತ್ತು ಮೀಮ್ ಒಂದು ಅಕ್ಷರವಾಗಿದೆ." ಅಲಿಫ್-ಲಾಮ್-ಮೀಮ್ ಮೂರು ಅಕ್ಷರಗಳಾಗಿದ್ದು ಅದನ್ನು ಪಠಿಸಿದರೆ ಮೂವತ್ತು ಒಳಿತುಗಳನ್ನು ಮಾಡಿದ ಪ್ರತಿಫಲ ದೊರಕುತ್ತದೆ.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಲ್ಲಾ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ಮರಿಸುತ್ತಿದ್ದರು."
Al-Bukhari as Mu‘allaq/hanging, with a decisive formಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ಹೇಳುವುದೇನೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನನ್ನು ಸ್ಮರಿಸಲು ಅತೀವ ಉತ್ಸಾಹ ತೋರುತ್ತಿದ್ದರು. ಅವರು ಎಲ್ಲಾ ಸಮಯ, ಸ್ಥಳ ಮತ್ತು ಸ್ಥಿತಿಗಳಲ್ಲಿ ಅಲ್ಲಾಹನನ್ನು ಸ್ಮರಿಸುತ್ತಿದ್ದರು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಪಶ್ಚಿಮದಿಂದ ಉದಯವಾಗುವ ತನಕ ಪ್ರಳಯ ಸಂಭವಿಸುವುದಿಲ್ಲ. ಅದು ಉದಯವಾದಾಗ ಜನರೆಲ್ಲರೂ ಅದನ್ನು ನೋಡಿ ವಿಶ್ವಾಸವಿಡುತ್ತಾರೆ. ಅದು ಯಾವಾಗ ಎಂದರೆ: "ಮೊದಲೇ ವಿಶ್ವಾಸವಿಟ್ಟವರ ಅಥವಾ ತಮ್ಮ ವಿಶ್ವಾಸದ ಮೂಲಕ ಏನಾದರೂ ಒಳಿತನ್ನು ಮಾಡಿದವರ ಹೊರತು ಯಾವುದೇ ವ್ಯಕ್ತಿಗೂ ಅವನ ವಿಶ್ವಾಸವು ಪ್ರಯೋಜನ ನೀಡುವುದಿಲ್ಲ." [ಅನ್ಆಮ್ 158] (ಎಂದು ಅಲ್ಲಾಹು ಹೇಳಿದ ಸಮಯದಲ್ಲಾಗಿದೆ). ನಿಶ್ಚಯವಾಗಿಯೂ ಇಬ್ಬರು ವ್ಯಕ್ತಿಗಳು ಬಟ್ಟೆಯನ್ನು ಹರಡಿ ಅದನ್ನು ಖರೀದಿಸುವುದಕ್ಕೆ ಅಥವಾ ಅದನ್ನು ಮಡಚಿಡುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಒಂಟೆಯ ಹಾಲನ್ನು ಕರೆದು ಅದನ್ನು ಕುಡಿಯುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ತನ್ನ ನೀರಿನ ಕೊಳವನ್ನು ಸರಿಪಡಿಸಿ (ಜಾನುವಾರುಗಳಿಗೆ) ನೀರುಣಿಸುವ ಮೊದಲೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಆಹಾರದ ತುತ್ತನ್ನು ಎತ್ತಿ ಬಾಯಿಗಿಡುವ ಮೊದಲೇ ಪ್ರಳಯವು ಸಂಭವಿಸುತ್ತದೆ."
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮಹಾಪ್ರಳಯದ ಕೆಲವು ಚಿಹ್ನೆಗಳನ್ನು ವಿವರಿಸುತ್ತಾರೆ. ಅವುಗಳಲ್ಲೊಂದು ಸೂರ್ಯ ಪೂರ್ವದ ಬದಲು ಪಶ್ಚಿಮದಿಂದ ಉದಯವಾಗುವುದು. ಅದನ್ನು ನೋಡಿದಾಗ ಜನರೆಲ್ಲರೂ ವಿಶ್ವಾಸವಿಡುತ್ತಾರೆ. ಆ ಸಮಯದಲ್ಲಿ ವಿಶ್ವಾಸವಿಡುವುದರಿಂದ, ಸತ್ಕರ್ಮ ಮಾಡುವುದರಿಂದ ಅಥವಾ ಪಶ್ಚಾತಾಪ ಪಡುವುದರಿಂದ ಸತ್ಯನಿಷೇಧಿಗೆ ಯಾವುದೇ ಪ್ರಯೋಜನವಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಳಯವು ಹಠಾತ್ತಾಗಿ ಸಂಭವಿಸುತ್ತದೆ ಎಂದು ಹೇಳುತ್ತಾರೆ. ಅಂದರೆ, ಜನರು ಅವರ ದೈನಂದಿನ ಕೆಲಸಗಳಲ್ಲಿ ಮುಳುಗಿರುವಾಗಲೇ ಪ್ರಳಯ ಸಂಭವಿಸುತ್ತದೆ. ಬಟ್ಟೆ ವ್ಯಾಪಾರಿ ಗ್ರಾಹಕನಿಗೆ ಬಟ್ಟೆಯನ್ನು ಹರಡಿ ತೋರಿಸುತ್ತಿರುವಾಗ ಗ್ರಾಹಕ ಅದನ್ನು ಖರೀದಿಸುವುದಕ್ಕೆ ಮುಂಚೆ ಅಥವಾ ಮಡಚಿಡುವುದಕ್ಕೆ ಮುಂಚೆ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ಒಂಟೆಯ ಹಾಲನ್ನು ಕರೆದು ಅದನ್ನು ಕುಡಿಯುವಷ್ಟರಲ್ಲಿ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ತನ್ನ ನೀರಿನ ಕೊಳವನ್ನು ಗಾರೆಯಿಂದ ಸರಿಪಡಿಸಿ ಅದಕ್ಕೆ ನೀರು ತುಂಬುವ ಮೊದಲೇ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ಆಹಾರ ಸೇವಿಸಲು ತುತ್ತನ್ನು ಎತ್ತಿ ಬಾಯಿಗಿಡುವ ಮೊದಲೇ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ.
ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ಪುನರುತ್ಥಾನ ದಿನದಂದು) ಸಾವನ್ನು ಕಪ್ಪು ಮತ್ತು ಬಿಳಿ ಬಣ್ಣವಿರುವ ಟಗರಿನ ರೂಪದಲ್ಲಿ ತರಲಾಗುವುದು. ಆಗ ಒಬ್ಬರು, "ಓ ಸ್ವರ್ಗವಾಸಿಗಳೇ!" ಎಂದು ಕೂಗಿ ಕರೆಯುವರು. ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಸ್ವರ್ಗವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅವರು, "ಓ ನರಕವಾಸಿಗಳೇ" ಎಂದು ಕೂಗಿ ಕರೆಯುವರು. ಆಗ ನರಕವಾಸಿಗಳು ತಮ್ಮ ಕತ್ತುಗಳನ್ನೆತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ನರಕವಾಸಿಗಳು ಉತ್ತರಿಸುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿದ ಬಳಿಕ ಅದನ್ನು ಕೊಯ್ಯಲಾಗುವುದು. ನಂತರ ಅವರು ಹೇಳುವರು: "ಓ ಸ್ವರ್ಗವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ, ನೀವು ಶಾಶ್ವತರು. ಇನ್ನು ನಿಮಗೆ ಸಾವಿಲ್ಲ." ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ.” [ಮರ್ಯಮ್ 39] ಇಹಲೋಕದ ಈ ಜನರು ನಿರ್ಲಕ್ಷ್ಯದಲ್ಲಿದ್ದಾರೆ. "ಮತ್ತು ಅವರ ವಿಶ್ವಾಸವಿಡುವುದಿಲ್ಲ." [ಮರ್ಯಮ್ 39]
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಪುನರುತ್ಥಾನ ದಿನದಂದು ಸಾವನ್ನು ಕಪ್ಪು ಬಿಳುಪು ರೋಮಗಳಿರುವ ಟಗರಿನ ರೂಪದಲ್ಲಿ ತರಲಾಗುವುದು. ಆಗ ಒಬ್ಬರು ಕೂಗಿ ಹೇಳುವರು: "ಓ ಸ್ವರ್ಗವಾಸಿಗಳೇ!" ಆಗ ಸ್ವರ್ಗವಾಸಿಗಳು ತಮ್ಮ ಕತ್ತುಗಳನ್ನು ಮತ್ತು ತಲೆಗಳನ್ನು ಎತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿ ತಿಳಿಯುವರು. ನಂತರ ಅವರು ಕೂಗಿ ಕರೆಯುವರು: "ಓ ನರಕವಾಸಿಗಳೇ!" ಆಗ ನರಕವಾಸಿಗಳು ತಮ್ಮ ಕತ್ತುಗಳನ್ನು ಮತ್ತು ತಲೆಗಳನ್ನು ಎತ್ತಿ ನೋಡುವರು. ಅವರು ಕೇಳುವರು: "ಇದೇನೆಂದು ನಿಮಗೆ ತಿಳಿದಿದೆಯೇ?" ಅವರು ಹೇಳುವರು: "ತಿಳಿದಿದೆ; ಅದು ಸಾವು." ಅವರೆಲ್ಲರೂ ಅದನ್ನು ನೋಡಿ ತಿಳಿಯುವರು. ನಂತರ ಅದನ್ನು ಕೊಯ್ಯಲಾಗುವುದು. ನಂತರ ಅವರು ಕೂಗಿ ಹೇಳುವರು: "ಓ ಸ್ವರ್ಗವಾಸಿಗಳೇ! ನೀವು ಶಾಶ್ವತವಾಗಿ ಸ್ವರ್ಗದಲ್ಲಿರುವಿರಿ. ಇನ್ನು ನಿಮಗೆ ಸಾವಿಲ್ಲ. ಓ ನರಕವಾಸಿಗಳೇ! ನೀವು ಶಾಶ್ವತವಾಗಿ ನರಕದಲ್ಲಿರುವಿರಿ. ಇನ್ನು ನಿಮಗೆ ಸಾವಿಲ್ಲ." ಇದು ಸತ್ಯವಿಶ್ವಾಸಿಗಳಿಗೆ ದೊರೆಯುವ ಅನುಗ್ರಹಗಳಿಗೆ ಮತ್ತು ಸತ್ಯನಿಷೇಧಿಗಳಿಗೆ ದೊರೆಯುವ ಶಿಕ್ಷೆಗೆ ಒಂದು ಹೆಚ್ಚುವರಿ ಸೇರ್ಪಡೆಯಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಈ ವಚನವನ್ನು ಪಠಿಸಿದರು: “ಮತ್ತು ಎಲ್ಲಾ ಕಾರ್ಯಗಳಿಗೂ ತೀರ್ಪು ನೀಡಲಾಗುವ ಆ ವ್ಯಥೆಯ ದಿನದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿರಿ. ಆದರೆ ಅವರು ನಿರ್ಲಕ್ಷ್ಯದಲ್ಲಿದ್ದಾರೆ. ಮತ್ತು ಅವರು ವಿಶ್ವಾಸವಿಡುವುದಿಲ್ಲ.” [ಮರ್ಯಮ್ 39] ಪುನರುತ್ಥಾನ ದಿನದಂದು ಸ್ವರ್ಗವಾಸಿಗಳನ್ನು ಮತ್ತು ನರಕವಾಸಿಗಳನ್ನು ಬೇರ್ಪಡಿಸಲಾಗುತ್ತದೆ. ಪ್ರತಿಯೊಬ್ಬರು ತಮ್ಮ ತಮ್ಮ ಶಾಶ್ವತ ಠಿಕಾಣಿಗಳಿಗೆ ತೆರಳುತ್ತಾರೆ. ಆಗ ಕೆಡುಕು ಮಾಡಿದವರು ಒಳಿತು ಮಾಡಲಿಲ್ಲವಲ್ಲ ಎಂದು ಕೊರಗುವರು ಮತ್ತು (ಸತ್ಕರ್ಮಗಳಲ್ಲಿ) ಕೊರತೆ ಮಾಡಿದವರು ಹೆಚ್ಚು ಸತ್ಕರ್ಮಗಳನ್ನು ನಿರ್ವಹಿಸಲಿಲ್ಲವಲ್ಲ ಎಂದು ಅಲವತ್ತುಕೊಳ್ಳುವರು.