





























Hadeeth Cards
Da'wa cards that highlight great meanings from the noble prophetic hadiths in a simple style and attractive display that helps the Muslim to have a deeper understanding of his religion in an easy way
All
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮ ತಂದೆ-ತಾಯಿ, ಮಕ್ಕಳು ಮತ್ತು ಇತರೆಲ್ಲಾ ಜನರಿಗಿಂತ ನಾನು ನಿಮಗೆ ಹೆಚ್ಚು ಪ್ರೀತಿಯುಳ್ಳವನಾಗುವ ತನಕ ನಿಮ್ಮಲ್ಲಿ ಯಾರೂ ಸಂಪೂರ್ಣ ಸತ್ಯವಿಶ್ವಾಸಿಯಾಗುವುದಿಲ್ಲ."
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಎಲ್ಲಿಯ ತನಕ ಒಬ್ಬ ಮುಸಲ್ಮಾನನು ತನ್ನ ತಾಯಿ, ತಂದೆ, ಮಗ, ಮಗಳು ಮತ್ತು ಇತರೆಲ್ಲ ಜನರಲ್ಲಿರುವ ಪ್ರೀತಿಗಿಂತ ಪ್ರವಾದಿಯವರಲ್ಲಿರುವ ಪ್ರೀತಿಗೆ ಪ್ರಾಶಸ್ತ್ಯ ನೀಡುವುದಿಲ್ಲವೋ ಅಲ್ಲಿಯ ತನಕ ಅವನು ಪೂರ್ಣ ರೀತಿಯಲ್ಲಿ ಸತ್ಯವಿಶ್ವಾಸಿಯಾಗುವುದಿಲ್ಲ. ಪ್ರವಾದಿಯವರಲ್ಲಿರುವ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೀತಿಯು ಅವರನ್ನು ಅನುಸರಿಸಲು, ಅವರಿಗೆ ಸಹಾಯ ಮಾಡಲು ಮತ್ತು ಅವರಿಗೆ ಅವಿಧೇಯತೆ ತೋರದಿರಲು ಕಾರಣವಾಗಬೇಕು.
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸುಬ್ಹಾನಲ್ಲಾಹಿ, ವಲ್ಹಂದುಲಿಲ್ಲಾಹಿ, ವಲಾಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್ ಎಂದು ಹೇಳುವುದು ಸೂರ್ಯ ಬೆಳಗಿದ ಎಲ್ಲ ವಸ್ತುಗಳಿಗಿಂತಲೂ ನನಗೆ ಹೆಚ್ಚು ಇಷ್ಟವಾಗಿದೆ."
Muslimಈ ಮಹಾನ್ ವಚನಗಳ ಮೂಲಕ ಅಲ್ಲಾಹನನ್ನು ಸ್ಮರಿಸುವುದು ಇಹಲೋಕ ಮತ್ತು ಅದರಲ್ಲಿರುವ ಎಲ್ಲಾ ವಸ್ತುಗಳಿಗಿಂತಲೂ ಶ್ರೇಷ್ಠವಾಗಿದೆಯೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುತ್ತಾರೆ. ಸುಬ್ಹಾನಲ್ಲಾಹ್ ಎಂದರೆ ಅಲ್ಲಾಹನನ್ನು ಎಲ್ಲಾ ರೀತಿಯ ಅಪರಿಪೂರ್ಣತೆಗಳಿಂದ ಪರಿಶುದ್ಧಗೊಳಿಸುವುದು. ಅಲ್-ಹಮ್ದುಲಿಲ್ಲಾಹ್ ಎಂದರೆ ಅಲ್ಲಾಹನನ್ನು ಪ್ರೀತಿಸುವುದು ಮತ್ತು ಅತಿಯಾಗಿ ಗೌರವಿಸುವುದರ ಜೊತೆಗೆ ಅವನನ್ನು ಸಂಪೂರ್ಣತೆಯ ಗುಣಗಳಿಂದ ಪ್ರಶಂಸಿಸುವುದು. ಲಾ ಇಲಾಹ ಇಲ್ಲಲ್ಲಾಹ್ ಎಂದರೆ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ. ಅಲ್ಲಾಹು ಅಕ್ಬರ್ ಅಂದರೆ ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು ಮತ್ತು ಮಹಾಮಹಿಮನು.
ಅನಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾವು ಉಮರ್ ರವರ ಜೊತೆಗಿದ್ದಾಗ ಅವರು ಹೇಳಿದರು: "(ಅನಗತ್ಯ) ಹೊರೆ ಹೊರುವುದನ್ನು ನಮಗೆ ವಿರೋಧಿಸಲಾಗಿದೆ."
Al-Bukhariಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಇಲ್ಲಿ ತಿಳಿಸುವುದೇನೆಂದರೆ, ಅನಗತ್ಯವಾಗಿ ನಮ್ಮನ್ನು ನಾವೇ ತೊಂದರೆಗೊಳಪಡಿಸುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ವಿರೋಧಿಸಿದ್ದಾರೆ. ಅದು ಮಾತುಗಳಲ್ಲಾದರೂ ಕೆಲಸಗಳಲ್ಲಾದರೂ ಸಹ.
ಅಬೂ ಮೂಸಾ ಅಶ್ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಒಬ್ಬ ದಾಸ ಅನಾರೋಗ್ಯ ಪೀಡಿತನಾದರೆ ಅಥವಾ ಪ್ರಯಾಣದಲ್ಲಿದ್ದರೆ, ಅವನು ನಿವಾಸಿಯಾಗಿದ್ದಾಗ ಮತ್ತು ಆರೋಗ್ಯವಂತನಾಗಿದ್ದಾಗ ಏನೆಲ್ಲಾ ಕರ್ಮಗಳನ್ನು ಮಾಡುತ್ತಿದ್ದನೋ ಅವೆಲ್ಲವನ್ನೂ ಅವನ ಹೆಸರಿಗೆ ದಾಖಲಿಸಲಾಗುತ್ತದೆ.”
Al-Bukhariಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ಅಲ್ಲಾಹನ ಅನುಗ್ರಹ ಮತ್ತು ಕರುಣೆಯ ಬಗ್ಗೆ ತಿಳಿಸುತ್ತಿದ್ದಾರೆ ಒಬ್ಬ ಮುಸಲ್ಮಾನನು ಆರೋಗ್ಯವಂತನಾಗಿರುವಾಗ ಅಥವಾ ಊರಿನಲ್ಲಿರುವಾಗ ರೂಢಿಯಾಗಿ ಕೆಲವು ಸತ್ಕರ್ಮಗಳನ್ನು ಮಾಡುತ್ತಿದ್ದು, ಅನಾರೋಗ್ಯ ಪೀಡಿತನಾದಾಗ, ಅಥವಾ ಪ್ರಯಾಣದಲ್ಲಿರುವಾಗ, ಅಥವಾ ಇತರ ಯಾವುದೇ ಕಾರಣದಿಂದ ಅವನಿಗೆ ಅವುಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಅವನು ಆರೋಗ್ಯವಂತನಾಗಿದ್ದಾಗ ಮತ್ತು ಊರಿನಲ್ಲಿದ್ದಾಗ ಅವುಗಳನ್ನು ಮಾಡಿದರೆ ಅವನಿಗೆ ಎಷ್ಟು ಪ್ರತಿಪಲ ದಾಖಲಾಗುತ್ತಿತ್ತೋ ಅಷ್ಟೇ ಪ್ರತಿಫಲವನ್ನು ಪೂರ್ಣವಾಗಿ ದಾಖಲಿಸಲಾಗುವುದು.
ತಮೀಮ್ ಅದ್ದಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಧರ್ಮವು ಹಿತಚಿಂತನೆಯಾಗಿದೆ." ನಾವು ಕೇಳಿದೆವು: "ಯಾರ ಹಿತಚಿಂತನೆ?" ಅವರು ಉತ್ತರಿಸಿದರು: "ಅಲ್ಲಾಹನ, ಅವನ ಗ್ರಂಥದ, ಅವನ ಸಂದೇಶವಾಹಕರ, ಮುಸ್ಲಿಂ ಆಡಳಿತಗಾರರ ಮತ್ತು ಮುಸ್ಲಿಂ ಜನಸಾಮಾನ್ಯರ ಹಿತಚಿಂತನೆ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಧರ್ಮವು ನಿಷ್ಕಳಂಕ ಮತ್ತು ಪ್ರಾಮಾಣಿಕತೆಯೆಂಬ ಹಿತಚಿಂತನೆಯ ಮೇಲೆ ನಿಂತಿದ್ದು, ಅದನ್ನು ಅಲ್ಲಾಹು ಕಡ್ಡಾಯಗೊಳಿಸಿದಂತೆ ಪೂರ್ಣರೂಪದಲ್ಲಿ ಯಾವುದೇ ಕೊರತೆ ಅಥವಾ ವಂಚನೆ ಮಾಡದೆ ನಿರ್ವಹಿಸಬೇಕಾಗಿದೆ. ಆಗ ಸಂಗಡಿಗರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ಯಾರ ಕುರಿತಾದ ಹಿತಚಿಂತನೆ?" ಅವರು ಹೇಳಿದರು: ಮೊದಲನೆಯದಾಗಿ, ಸರ್ವಶಕ್ತನಾದ ಅಲ್ಲಾಹನ ಕುರಿತಾದ ಹಿತಚಿಂತನೆ. ಅಂದರೆ ಅವನ ಸಂಪ್ರೀತಿಗಾಗಿ ಮಾತ್ರ ಕರ್ಮವೆಸಗುವುದು, ಅವನೊಡನೆ ಸಹಭಾಗಿತ್ವ (ಶಿರ್ಕ್) ಮಾಡದಿರುವುದು, ಅವನ ಪ್ರಭುತ್ವ, ದೈವಿಕತೆ ಹಾಗೂ ಅವನ ಹೆಸರು ಮತ್ತು ಗುಣಲಕ್ಷಣಗಳಲ್ಲಿ ವಿಶ್ವಾಸವಿಡುವುದು, ಅವನ ಆಜ್ಞೆಗೆ ತಲೆಬಾಗುವುದು ಮತ್ತು ಅವನಲ್ಲಿ ವಿಶ್ವಾಸವಿಡಲು ಜನರನ್ನು ಆಮಂತ್ರಿಸುವುದು. ಎರಡನೆಯದಾಗಿ, ಅವನ ಗ್ರಂಥದ ಕುರಿತಾದ ಹಿತಚಿಂತನೆ—ಪವಿತ್ರ ಕುರ್ಆನಿನ ಕುರಿತಾದ ಹಿತಚಿಂತನೆ. ಅಂದರೆ, ಪವಿತ್ರ ಕುರ್ಆನ್ ಅಲ್ಲಾಹನ ವಚನಗಳು, ಅವನ ಅಂತಿಮ ಗ್ರಂಥ ಮತ್ತು ಅದು ಅದರ ಹಿಂದಿನ ಧರ್ಮಸಂಹಿತೆಗಳನ್ನು ರದ್ದುಗೊಳಿಸಿದೆ ಎಂದು ವಿಶ್ವಾಸವಿಡುವುದು, ಅದನ್ನು ಗೌರವಿಸುವುದು, ಅದನ್ನು ಪಠಿಸಬೇಕಾದ ರೀತಿಯಲ್ಲೇ ಪಠಿಸುವುದು, ಅದರ ಸ್ಪಷ್ಟವಚನಗಳ ಆಧಾರದಲ್ಲಿ ಕರ್ಮವೆಸಗುವುದು, ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಹೊಂದಿರುವ ಹೋಲಿಕೆಯಿರುವ ವಚನಗಳನ್ನು (ಮುತಶಾಬಿಹಾತ್) ಅಂಗೀಕರಿಸುವುದು, ವಕ್ರ ಮನಸ್ಸಿನವರ ತಪ್ಪು ವಿವರಣೆಗಳಿಂದ ಅದನ್ನು ಕಾಪಾಡುವುದು, ಅದರಲ್ಲಿರುವ ಉಪದೇಶಗಳನ್ನು ಸ್ವೀಕರಿಸುವುದು, ಅದರ ಜ್ಞಾನವನ್ನು ಪ್ರಸರಿಸುವುದು ಮತ್ತು ಅದರ ಕಡೆಗೆ ಜನರನ್ನು ಆಮಂತ್ರಿಸುವುದು. ಮೂರನೆಯದಾಗಿ, ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುರಿತಾದ ಹಿತಚಿಂತನೆ. ಅಂದರೆ ಅವರು ಅಂತಿಮ ಪ್ರವಾದಿಯೆಂದು ವಿಶ್ವಾಸವಿಡುವುದು, ಅವರು ತಂದ ಸಂದೇಶವನ್ನು ಅಂಗೀಕರಿಸುವುದು, ಅವರ ಆಜ್ಞೆಗಳನ್ನು ಪಾಲಿಸುವುದು, ಅವರು ವಿರೋಧಿಸಿದ ವಿಷಯಗಳಿಂದ ದೂರವಿರುವುದು, ಅವರು ತೋರಿಸಿಕೊಟ್ಟ ರೀತಿಯಲ್ಲೇ ಅಲ್ಲಾಹನನ್ನು ಆರಾಧಿಸುವುದು, ಅವರನ್ನು ಗೌರವಿಸುವುದು, ಅವರ ಹಕ್ಕುಗಳನ್ನು ಸಂರಕ್ಷಿಸುವುದು, ಅವರ ಧರ್ಮವನ್ನು ಪ್ರಚಾರ ಮಾಡುವುದು ಮತ್ತು ಅವರ ಬಗ್ಗೆ ಎತ್ತಲಾಗುವ ಆರೋಪಗಳನ್ನು ನಿಷೇಧಿಸುವುದು. ನಾಲ್ಕನೆಯದಾಗಿ, ಮುಸ್ಲಿಮ್ ಮುಖಂಡರ ಕುರಿತಾದ ಹಿತಚಿಂತನೆ. ಅಂದರೆ, ಸತ್ಯದಲ್ಲಿ ಅವರಿಗೆ ಸಹಾಯ ಮಾಡುವುದು, ಅಧಿಕಾರಕ್ಕಾಗಿ ಅವರ ವಿರುದ್ಧ ಹೋರಾಡದಿರುವುದು, ಅಲ್ಲಾಹು ಆಜ್ಞಾಪಿಸಿದ ವಿಷಯಗಳಲ್ಲಿ ಅವರ ಮಾತುಗಳನ್ನು ಆಲಿಸುವುದು ಮತ್ತು ಅನುಸರಿಸುವುದು. ಐದನೆಯದಾಗಿ, ಮುಸ್ಲಿಮರ ಕುರಿತಾದ ಹಿತಚಿಂತನೆ. ಅಂದರೆ, ಅವರಿಗೆ ಒಳಿತು ಮಾಡುವುದು, ಅವರನ್ನು ಸನ್ಮಾರ್ಗಕ್ಕೆ ಆಮಂತ್ರಿಸುವುದು, ಅವರಿಗೆ ಸಂಭವಿಸಬಹುದಾದ ತೊಂದರೆಗಳನ್ನು ತಡೆಗಟ್ಟುವುದು, ಅವರಿಗೆ ಒಳಿತನ್ನು ಬಯಸುವುದು ಮತ್ತು ಒಳಿತು ಹಾಗೂ ದೇವಭಯದಲ್ಲಿ ಅವರಿಗೆ ಸಹಾಯ ಮಾಡುವುದು.
ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಈ ಮನೆಯಲ್ಲಿ ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಓ ಅಲ್ಲಾಹ್! ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಕಠಿಣವಾಗಿ ವರ್ತಿಸುವವರೊಡನೆ ನೀನು ಕೂಡ ಕಠಿಣವಾಗಿ ವರ್ತಿಸು; ಮತ್ತು ನನ್ನ ಸಮುದಾಯದ ಮೇಲೆ ಅಧಿಕಾರ ಪಡೆದು ಅವರೊಡನೆ ಮೃದುವಾಗಿ ವರ್ತಿಸುವವರೊಡನೆ ನೀನು ಕೂಡ ಮೃದುವಾಗಿ ವರ್ತಿಸು."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರಾರ್ಥಿಸುವುದೇನೆಂದರೆ, ಮುಸಲ್ಮಾನರ ಮೇಲೆ ಅಧಿಕಾರವಿರುವವರು, ಅದು ಎಷ್ಟೇ ಚಿಕ್ಕ ಅಥವಾ ಎಷ್ಟೇ ದೊಡ್ಡ ಅಧಿಕಾರವಾಗಿದ್ದರೂ, ಅದು ಪೂರ್ಣ ರೂಪದ ಅಥವಾ ಆಂಶಿಕ ಅಧಿಕಾರವಾಗಿದ್ದರೂ, ಅವರು ಮುಸ್ಲಿಮರೊಡನೆ ಮೃದುವಾಗಿ ವರ್ತಿಸದೆ ಕಠಿಣವಾಗಿ ವರ್ತಿಸಿದರೆ, ಅವರು ಮಾಡಿದಂತೆಯೇ ಅಲ್ಲಾಹು ಕೂಡ ಅವರೊಡನೆ ಕಠಿಣವಾಗಿ ವರ್ತಿಸುತ್ತಾನೆ. ಆದರೆ ಅವರು ಅವರೊಡನೆ ಮೃದುವಾಗಿ ವರ್ತಿಸಿ, ಅವರಿಗೆ ಅವರ ಕಾರ್ಯಗಳನ್ನು ಸುಲಭಗೊಳಿಸಿದರೆ, ಅಲ್ಲಾಹು ಕೂಡ ಅವರೊಡನೆ ಮೃದುವಾಗಿ ವರ್ತಿಸಿ, ಅವರಿಗೆ ಅವರ ಕಾರ್ಯಗಳನ್ನು ಸುಲಭಗೊಳಿಸುತ್ತಾನೆ.
ಮಅಕಿಲ್ ಬಿನ್ ಯಸಾರ್ ಮುಝನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಲ್ಲಾಹು ಒಬ್ಬನಿಗೆ ಆಡಳಿತದ ಅಧಿಕಾರವನ್ನು ನೀಡಿ, ಅವನು ಇಹಲೋಕ ತ್ಯಜಿಸುವಾಗ ತನ್ನ ಪ್ರಜೆಗಳಿಗೆ ವಂಚನೆ ಮಾಡಿದ ಸ್ಥಿತಿಯಲ್ಲಿ ಇಹಲೋಕ ತ್ಯಜಿಸಿದರೆ ಅಲ್ಲಾಹು ಅವನಿಗೆ ಸ್ವರ್ಗವನ್ನು ನಿಷೇಧಿಸದೇ ಇರಲಾರ.”
Al-Bukhari and Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರನ್ನೆಲ್ಲಾ ಅಲ್ಲಾಹು ಜನರ ಮೇಲೆ ಆಡಳಿತಗಾರರನ್ನಾಗಿ ಅಥವಾ ಹೊಣೆಗಾರರನ್ನಾಗಿ ಮಾಡುತ್ತಾನೋ, ಅದು ಆಡಳಿತಗಾರರು ನಡೆಸುವ ಸಾರ್ವಜನಿಕ ಆಡಳಿತವಾಗಿದ್ದರೂ, ಅಥವಾ ಪುರುಷನು ಅಥವಾ ಮಹಿಳೆಯು ನಡೆಸುವ ಮನೆಯೊಳಗಿನ ಆಡಳಿತವಾಗಿದ್ದರೂ, ಅವರು ತಮ್ಮ ಅಧೀನದಲ್ಲಿರುವವರ ಹಕ್ಕುಗಳಲ್ಲಿ ಏನಾದರೂ ಚ್ಯುತಿ ಮಾಡುವುದು, ಅವರಿಗೆ ಮೋಸ ಮಾಡುವುದು, ಅಥವಾ ಅವರೊಡನೆ ಪ್ರಾಮಾಣಿಕತೆ ತೋರದಿರುವುದು ಮುಂತಾದ ಅವರ ಧಾರ್ಮಿಕ ಮತ್ತು ಭೌತಿಕ ಹಕ್ಕುಗಳನ್ನು ನೆರವೇರಿಸದಿದ್ದರೆ ಅವನು ಈ ಕಠೋರ ಶಿಕ್ಷೆಗೆ ಅರ್ಹನಾಗುತ್ತಾನೆ.
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಒಮ್ಮೆ ನಾವು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಬ್ಬ ವ್ಯಕ್ತಿ ಒಂಟೆಯಲ್ಲಿ ಸವಾರಿ ಮಾಡುತ್ತಾ ಅಲ್ಲಿಗೆ ಬಂದರು. ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿಹಾಕಿದರು. ನಂತರ ನಮ್ಮೊಡನೆ ಕೇಳಿದರು: "ನಿಮ್ಮಲ್ಲಿ ಮುಹಮ್ಮದ್ ಯಾರು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮ್ಮ ನಡುವೆ ಒರಗಿ ಕುಳಿತಿದ್ದರು. ನಾವು ಹೇಳಿದೆವು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಪ್ರವಾದಿಯವರು, "ನಾನು ನಿನಗೆ ಉತ್ತರ ನೀಡಲು ಇಲ್ಲಿದ್ದೇನೆ" ಎಂದು ಉತ್ತರಿಸಿದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಆಗ ಪ್ರವಾದಿಯವರು ಹೇಳಿದರು: "ನಿಮಗೆ ಕೇಳಲಿರುವುದನ್ನು ಕೇಳಿ." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಸಂಪೂರ್ಣ ಮನುಕುಲದ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಆ ವ್ಯಕ್ತಿ ಹೇಳಿದರು: "ತಾವು ತಂದ ಸಂದೇಶದಲ್ಲಿ ನಾನು ವಿಶ್ವಾಸವಿಟ್ಟಿದ್ದೇನೆ. ನಾನು ನನ್ನ ಗೋತ್ರದ ದೂತನಾಗಿ ಇಲ್ಲಿಗೆ ಬಂದಿದ್ದೇನೆ. ನಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ."
Al-Bukhariಅನಸ್ ಇಬ್ನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ: ಸಹಾಬಿಗಳು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ಕುಳಿತಿರುವಾಗ, ಒಂಟೆಯಲ್ಲಿ ಸವಾರಿ ಮಾಡುತ್ತಾ ಒಬ್ಬ ವ್ಯಕ್ತಿ ಅಲ್ಲಿಗೆ ಬಂದರು. ನಂತರ ಅವರು ಒಂಟೆಯನ್ನು ಮಸೀದಿಯೊಳಗೆ ಮಂಡಿಯೂರಿಸಿ ಕಟ್ಟಿ ಹಾಕಿದರು. ನಂತರ ಅವರೊಡನೆ, "ನಿಮ್ಮಲ್ಲಿ ಮುಹಮ್ಮದ್ ಯಾರು?" ಎಂದು ಕೇಳಿದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರ ನಡುವೆ ಒರಗಿ ಕುಳಿತಿದ್ದರು. ಸಹಾಬಿಗಳು ಉತ್ತರಿಸಿದರು: "ಒರಗಿ ಕುಳಿತಿರುವ ಈ ಬೆಳ್ಳಗಿನ ವ್ಯಕ್ತಿ." ಆಗ ಆ ವ್ಯಕ್ತಿ, "ಓ ಅಬ್ದುಲ್ ಮುತ್ತಲಿಬರ ಮಗನೇ!" ಎಂದು ಕರೆದರು. ಆಗ ಪ್ರವಾದಿಯವರು, "ನನಗೆ ನಿನ್ನ ಮಾತು ಕೇಳುತ್ತಿದೆ. ನಿನಗೇನು ಬೇಕು ಕೇಳು ಉತ್ತರಿಸುತ್ತೇನೆ" ಎಂದರು. ಆಗ ಆ ವ್ಯಕ್ತಿ ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ತಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ. ತಾವು ನನ್ನ ಮೇಲೆ ಕೋಪ ಮಾಡಿಕೊಳ್ಳಬಾರದು." ಅಂದರೆ, ನನ್ನ ಮೇಲೆ ಸಿಟ್ಟು ಮಾಡಿಕೊಳ್ಳಬಾರದು. ನನ್ನ ಪ್ರಶ್ನೆ ಕೇಳಿ ಕಸಿವಿಸಿಯಾಗಬಾರದು. ಅವರು ಹೇಳಿದರು: "ನೀನು ಕೇಳಲು ಬಯಸುವುದನ್ನು ಕೇಳು." ಆ ವ್ಯಕ್ತಿ ಕೇಳಿದರು: "ತಮ್ಮ ಮತ್ತು ತಮ್ಮ ಪೂರ್ವಜರ ಪರಿಪಾಲಕನನ್ನು (ಅಲ್ಲಾಹನನ್ನು) ಮುಂದಿಟ್ಟು ಕೇಳುತ್ತೇನೆ. ತಮ್ಮನ್ನು ಜನರ ಕಡೆಗೆ ಕಳುಹಿಸಿದ್ದು ಅಲ್ಲಾಹನೋ?" ಆಗ ಪ್ರವಾದಿಯವರು ತಾನು ಹೇಳುತ್ತಿರುವುದು ಸತ್ಯವೆಂದು ಒತ್ತುಕೊಡಲು ಆಣೆ ಹಾಕುತ್ತಾ ಹೇಳಿದರು: "ಅಲ್ಲಾಹನಾಣೆ! ಹೌದು." ಆ ವ್ಯಕ್ತಿ ಹೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ದಿನರಾತ್ರಿಯಲ್ಲಿ ನಾವು ಐದು ವೇಳೆಯ ನಮಾಝ್ಗಳನ್ನು, ಅಂದರೆ ಕಡ್ಡಾಯ ನಮಾಝ್ಗಳನ್ನು ನಿರ್ವಹಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ವರ್ಷದಲ್ಲಿ ಈ ತಿಂಗಳು, ಅಂದರೆ ರಮದಾನ್ ತಿಂಗಳು ನಾವು ಉಪವಾಸ ಆಚರಿಸಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಅವರು ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಅವರು ಕೇಳಿದರು: "ಅಲ್ಲಾಹನನ್ನು ಮುಂದಿಟ್ಟು ಕೇಳುತ್ತೇನೆ. ನಮ್ಮಲ್ಲಿನ ಶ್ರೀಮಂತರಿಂದ ಈ ದಾನವನ್ನು, ಅಂದರೆ ಝಕಾತನ್ನು ಪಡೆದು ನಮ್ಮಲ್ಲಿರುವ ಬಡವರಿಗೆ ಹಂಚಬೇಕೆಂದು ತಮಗೆ ಆದೇಶಿಸಿದ್ದು ಅಲ್ಲಾಹನೋ?" ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅಲ್ಲಾಹನಾಣೆ! ಹೌದು." ಆಗ ಅವರು ಇಸ್ಲಾಂ ಸ್ವೀಕರಿಸಿದರು ಮತ್ತು ತನ್ನ ಗೋತ್ರವನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸುತ್ತೇನೆಂದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. ನಂತರ ತನ್ನನ್ನು ಪರಿಚಯಿಸುತ್ತಾ ತಾನು ಬನೂ ಸಅದ್ ಗೋತ್ರಕ್ಕೆ ಸೇರಿದ ದಿಮಾಮ್ ಬಿನ್ ಸಅಲಬ ಎಂದು ಹೇಳಿದರು.
ಶದ್ದಾದ್ ಬಿನ್ ಔಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಾನು ಎರಡು ವಿಷಯಗಳನ್ನು ಕಲಿತಿದ್ದೇನೆ: "ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ಕಡ್ಡಾಯಗೊಳಿಸಿದ್ದಾನೆ. ಆದ್ದರಿಂದ ನೀವು (ಪ್ರತೀಕಾರಕ್ಕಾಗಿ) ಕೊಲ್ಲುವಾಗ ಉತ್ತಮ ರೀತಿಯಲ್ಲಿ ಕೊಲ್ಲಿರಿ. ನೀವು (ಪ್ರಾಣಿಗಳನ್ನು ಮಾಂಸಕ್ಕಾಗಿ) ಕೊಯ್ಯುವಾಗ ಉತ್ತಮ ರೀತಿಯಲ್ಲಿ ಕೊಯ್ಯಿರಿ. ನಿಮ್ಮಲ್ಲೊಬ್ಬನು ಕೊಯ್ಯುವಾಗ ಚೂರಿಯನ್ನು ಹರಿತಗೊಳಿಸಲಿ ಮತ್ತು ಪ್ರಾಣಿಗೆ ನಿರಾಳತೆಯನ್ನು ನೀಡಲಿ."
Muslimಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಪ್ರತಿಯೊಂದು ವಿಷಯದಲ್ಲೂ ಉತ್ತಮವಾಗಿ ವರ್ತಿಸುವುದನ್ನು ನಮ್ಮ ಮೇಲೆ ಕಡ್ಡಾಯಗೊಳಿಸಿದ್ದಾನೆ. ಉತ್ತಮವಾಗಿ ವರ್ತಿಸುವುದು ಎಂದರೆ, ಆರಾಧನೆ ಮಾಡುವಾಗ, ಜನರಿಗೆ ಒಳಿತು ಮಾಡುವಾಗ ಮತ್ತು ಜನರಿಗೆ ತೊಂದರೆಯಾಗುವುದನ್ನೂ ತಡೆಗಟ್ಟುವಾಗ ಸದಾ ಅಲ್ಲಾಹನ ಬಗ್ಗೆ ಪ್ರಜ್ಞೆಯನ್ನು ಹೊಂದಿರುವುದು. ಈ ಉತ್ತಮ ವರ್ತನೆಯು ಪ್ರಾಣಿಗಳನ್ನು ಕೊಯ್ಯುವಾಗಲೂ ಇರಬೇಕು. ಪ್ರತೀಕಾರಕ್ಕಾಗಿ ಕೊಲ್ಲುವಾಗ, ಹೆಚ್ಚು ನರಳದೆ ಅತ್ಯಂತ ಸುಲಭವಾಗಿ ಮತ್ತು ವೇಗವಾಗಿ ಜೀವ ಹೋಗುವ ವಿಧಾನವನ್ನು ಆರಿಸುವುದು ಉತ್ತಮ ವರ್ತನೆಯಾಗಿದೆ. ಪ್ರಾಣಿಯ ಮೇಲಿರುವ ಸಹಾನುಭೂತಿಯಿಂದ ಚೂರಿಯನ್ನು ಹರಿತಗೊಳಿಸುವುದು, ಪ್ರಾಣಿಗೆ ಕಾಣುವ ರೀತಿಯಲ್ಲಿ ಚೂರಿಯನ್ನು ಹರಿತಗೊಳಿಸದಿರುವುದು ಮತ್ತು ಇತರ ಪ್ರಾಣಿಗಳು ಕಾಣುವ ರೀತಿಯಲ್ಲಿ ಅದನ್ನು ಕೊಯ್ಯದಿರುವುದು ಪ್ರಾಣಿಗಳನ್ನು ಕೊಯ್ಯುವಾಗ ತೋರಬೇಕಾದ ಉತ್ತಮ ವರ್ತನೆಗಳಾಗಿವೆ.